ಪುಣೆ: ವರುಣನ ಆರ್ಭಟಕ್ಕೆ ಪುಣೆ ಮತ್ತು ಕೊಲ್ಹಾಪುರದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರವಾಗಿ ಸುರಿದ ಮಳೆಯಿಂದ ಪ್ರವಾಹ ಭೀತಿ ಎದುರಾದ ಬೆನ್ನಲ್ಲೇ ಇದೀಗ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಹಲವಾರು ವಸತಿ ಅಪಾರ್ಟ್‌ಮೆಂಟ್‌ಗಳು ನೀರಿನಿಂದ ಮುಳುಗಡೆಯಾಗಿದ್ದು, ಜನರು ಮನೆಯಿಂದ ಹೊರಬರಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಲಾವೃತಗೊಂಡ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮೂವರಿಗೆ ವಿದ್ಯುತ್ ತಗುಲಿ ಆಸ್ಪತ್ರೆ ಪಾಲಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸೇರಿ ಮೂರು ತಂಡಗಳು ಏಕತಾ ನಗರ, ಸಿನ್ಹಗಡ್ ರಸ್ತೆ ಮತ್ತು ವರ್ಜೆ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯವನ್ನು ಬಿರುಸಿನಿಂದ ಮುಂದುವರೆಸಿವೆ. ಕೆಲವೆಡೆ ಮನೆಗಳು ಮುಳುಗಿದ್ದು, ನೀರಿನ ಮಟ್ಟ ಏರಿಕೆಯಾಗಿದೆ. ಮುತಾ ನದಿಯ ಬಾಬಾ ಭಿಡೆ ಸೇತುವೆಯು ಮುಳುಗಿದ್ದು, ಸೇತುವೆ ಸಂಚಾರವನ್ನು ನಿಷೇಧಿಸಲಾಗಿದೆ.
ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುವಂತೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೂಚನೆ ನೀಡಿದ್ದಾರೆ. ಇನ್ನು ಭಾರೀ ಮಳೆಯ ಹಿನ್ನೆಲೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಿಗೆ ಎರಡು ದಿನಗಳು ಕಾಲ ನಿಷೇಧಾಜ್ಞೆ ಹೂರಡಿಸುವಂತೆ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಆದೇಶಿಸಿದ್ದಾರೆ. ಜಿಲ್ಲಾಡಳಿತವು ನಿವಾಸಿಗಳಿಗೆ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರುವಂತೆ ಮನವಿ ಮಾಡಿದೆ. (ಏಜೆನ್ಸೀಸ್)