ನ್ಯೂಸ್

ಪುಲ್ವಾಮಾ ದಾಳಿ ರೀತಿಯ ಉಗ್ರರ ದಾಳಿ ವಿಫಲಗೊಳಿಸಿದ ಭದ್ರತಾ ಪಡೆ

vinaymk1969

ಶ್ರೀನಗರ: 2019ರ ಫೆ.14ರಂದು ಉಗ್ರರು ನಡೆಸಿದ್ದ ಪುಲ್ವಾಮಾ ದಾಳಿ ರೀತಿಯ ಉಗ್ರರ ದಾಳಿಯನ್ನು ಭದ್ರತಾ ಪಡೆ ಸಿಬ್ಬಂದಿ ಬುಧವಾರ ರಾತ್ರಿ ವಿಫಲಗೊಳಿಸಿದ್ದಾರೆ.

ಸಿಕ್ಕ ಖಚಿತ ಮಾಹಿತಿಯನ್ನು ಆಧರಿಸಿ ರಾಜಪೋರಾದ ಅವಿಗುಂಡ್​ ಬಳಿಯ ಚೆಕ್​ಪೋಸ್ಟ್​ನಲ್ಲಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ 20 ಕೆ.ಜಿ. ಸುಧಾರಿತ ಸ್ಫೋಟ ಇರುವುದು ಪತ್ತೆಯಾಯಿತು. ವಶಕ್ಕೆ ಪಡೆಯುವಷ್ಟರಲ್ಲಿ ವಾಹನದ ಚಾಲಕ ಗುಂಡಿನ ದಾಳಿ ನಡೆಸುತ್ತಾ, ಕತ್ತಲಲ್ಲಿ ಪರಾರಿಯಾದ ಎನ್ನಲಾಗಿದೆ.

ಪರಾರಿಯಾಗಿರುವ ಕಾರಿನ ಚಾಲಕ ಹಿಜ್ಬುಲ್​ ಮುಜಾಹಿದ್ದೀನ್​ ಸಂಘಟನೆಗೆ ಸೇರಿದ ಉಗ್ರನಿರಬಹುದು ಎಂದು ಶಂಕಿಸಲಾಗಿದೆ.

ಕಾರಿನ ಹಿಂಬದಿಯಲ್ಲಿ ಡ್ರಮ್​ವೊಂದರಲ್ಲಿ ಸ್ಫೋಟಕಗಳನ್ನು ಅಡಗಿಸಿಡಲಾಗಿತ್ತು. ತಕ್ಷಣವೇ ಸ್ಥಳಕ್ಕೆ ಬಂದ ಬಾಂಬ್​ ನಿಷ್ಕ್ರಿಯ ದಳ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿ, ಸಂಭಾವ್ಯ ಉಗ್ರರ ದಾಳಿಯನ್ನು ವಿಫಲಗೊಳಿಸಿತು ಎನ್ನಲಾಗಿದೆ.

ಕಾರಿಗೆ ನಕಲಿ ನಂಬರ್​ ಪ್ಲೇಟ್​ ಲಗತ್ತಿಸಲಾಗಿತ್ತು. ಕಥುವಾ ಜಿಲ್ಲೆಯಲ್ಲಿ ನೋಂದಾಯಿಸಲ್ಪಟ್ಟಿರುವ ಯಾವುದೋ ಸ್ಕೂಟರ್​ನ ನೋಂದಣಿ ಸಂಖ್ಯೆಯನ್ನು ಬಳಸಲಾಗಿತ್ತು ಎನ್ನಲಾಗಿದೆ. ವಾಹನವನ್ನು ಸದ್ಯ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ವಶಕ್ಕೆ ಪಡೆದುಕೊಂಡಿದೆ.