ನ್ಯೂಸ್

PSI Exam : ಅ.3ರಂದು ಪಿಎಸ್‌ಐ ನೇಮಕಾತಿ ಪರೀಕ್ಷೆ; ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ಪರೀಕ್ಷಾರ್ಥಿಗಳು ಕಾತರದಿಂದ ಕಾಯುತ್ತಿದ್ದ 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ PSI Exam ನೇಮಕಾತಿಗೆ ಅಕ್ಟೋಬರ್ 3ರಂದು ಕ್ಯಾಮರಾ ಕಣ್ಗಾವಲಿನಲ್ಲಿ ಲಿಖಿತ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬೆಂಗಳೂರು, ವಿಜಯಪುರ, ಶಿವಮೊಗ್ಗ, ಕಲಬುರಗಿ, ಧಾರವಾಡ ಮತ್ತು ದಾವಣಗೆರೆ ಸೇರಿ ಒಟ್ಟು 163 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪಿಎಸ್​ಐ ನೇಮಕಾತಿ ಪರೀಕ್ಷೆ ಬರೆಯಲು ಒಟ್ಟು 66,990 ಮಂದಿ ಅರ್ಹರಾಗಿದ್ದು, ಪರೀಕ್ಷಾ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆ ಆರಂಭಕ್ಕೆ ಅರ್ಧ ಗಂಟೆ‌ ಮೊದಲು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಕಡ್ಡಾಯವಾಗಿ ಇರಬೇಕು. ಹೀಗಾಗಿ ಅಭ್ಯರ್ಥಿಗಳು ಬೇಗ ಬಂದು ಪೊಲೀಸರ ತಪಾಸಣೆಗೆ ಒಳಪಡಬೇಕು. ತಡವಾಗಿ ಬರುವವರಿಗೆ ಪ್ರವೇಶ ಇರುವುದಿಲ್ಲ. ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು‌‌ ಎಚ್ಚರಿಸಿದ್ದಾರೆ.

ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಕ್ಯಾಮರಾ ಅಳವಡಿಸಿದ್ದು, ವೆಬ್ ಕಾಸ್ಟಿಂಗ್ ಮೂಲಕ ಅಲ್ಲಿನ ಎಲ್ಲ ಬೆಳವಣಿಗೆಗಳನ್ನು ವೀಕ್ಷಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿ ಕೇಂದ್ರದಲ್ಲೂ ಜಾಮರ್ ಅಳವಡಿಸಲು ಕ್ರಮ ತೆಗೆದುಕೊಂಡಿದ್ದು, ಆಸುಪಾಸಿನಲ್ಲಿ ಬ್ಲೂಟೂತ್‌ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು ಕಾರ್ಯನಿರ್ವಹಿಸದಂತೆ ಮಾಡಲಾಗಿದೆ.

ಕಮಾಂಡ್ ಸೆಂಟರ್ ಸ್ಥಾಪನೆ

ಬೆಂಗಳೂರಿನ ಕೆಇಎ ಕಚೇರಿಯಲ್ಲಿ ರಾಜ್ಯ ಮಟ್ಟದ ಕಮಾಂಡ್ ಸೆಂಟರ್ ಸ್ಥಾಪಿಸಿದ್ದು, ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲಿ ಆಗುವ ಬೆಳವಣಿಗೆಗಳನ್ನು ಗಮನಿಸಲು ಟಿವಿಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಕೂಡ ಒಂದು ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲಿದೆ.

ಪ್ರಶ್ನೆ ಪತ್ರಿಕೆ ಸ್ವೀಕಾರ ಮತ್ತು ಅದರ ಬಂಡಲ್ ತೆರೆಯುವ ಎಲ್ಲ ಪ್ರಕ್ರಿಯೆಯನ್ನೂ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಅಲ್ಲದೆ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಅವರ ಬೆರಳಚ್ಚು ಮತ್ತು ಭಾವಚಿತ್ರವನ್ನು ತೆಗೆದುಕೊಂಡು ಅಲ್ಲೇ ಅದನ್ನು ಅವರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಲಗತ್ತಿಸಿರುವ ಚಿತ್ರದ ಜತೆಗೂ ಆನ್ ಲೈನ್ ನಲ್ಲಿ ಹೊಂದಾಣಿಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹೀಗೆ ಮಾಡುವುದರಿಂದ ಯಾರದೊ ಹೆಸರಿನಲ್ಲಿ ಇನ್ಯಾರೊ ಪರೀಕ್ಷೆ ಬರೆಯುವುದನ್ನು ತಡೆಯಬಹುದು. ಬೇರೆ ಜಿಲ್ಲೆಗಳ ವಿಶೇಷ ವೀಕ್ಷಕರನ್ನೂ ನಿಯೋಜಿಸಿದ್ದು, ಅವರು ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಲಿದ್ದಾರೆ.