ನ್ಯೂಸ್

ಸಂಪಾದಕೀಯ | ಸಕಾಲಕ್ಕೆ ಪಠ್ಯ, ಪರಿಕರ ಪೂರೈಸಿ

ಮೋಹನ್​ ಶೆಟ್ಟಿ

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಚಟುವಟಿಕೆಗಳು ಆರಂಭಗೊಳ್ಳಲು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಆದರೆ, ಶಾಲೆಗೆ ಮಕ್ಕಳು ಶಿಸ್ತಿನಿಂದ ಬರಲು ಅಗತ್ಯವಿರುವ ಸಮವಸ್ತ್ರಗಳು ಮತ್ತು ಕಲಿಯಲು ಅಗತ್ಯವಾಗಿ ಬೇಕಾದ ಪಠ್ಯಪರಿಕರಗಳು ಮಾತ್ರ ಎಲ್ಲ ಮಕ್ಕಳಿಗೆ ಇದುವರೆಗೂ ಸಿಕ್ಕಿಲ್ಲ. ಶಾಲೆ ಆರಂಭವಾಗುವ ವೇಳೆಗೆ ಮೂಲಭೂತವಾಗಿ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್, ಪಠ್ಯಪುಸ್ತಕ ಅತ್ಯಗತ್ಯ. ಶಾಲೆಯಲ್ಲಿ ನೆಮ್ಮದಿಯಾಗಿ ಕಲಿಯಲು ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ ಹಾಗೂ ಶಿಕ್ಷಕರ ನೇಮಕಾತಿ ಕೂಡ ಅಗತ್ಯ. ಇಷ್ಟು ವಿಚಾರಗಳಲ್ಲಿ ಸರ್ಕಾರ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡರೆ ಪ್ರತಿ ವರ್ಷ ಮರುಕಳಿಸುವ ಸಮಸ್ಯೆಗಳ ಸರಮಾಲೆಯಿಂದ ಪಾರಾದಂತೆಯೇ ಸರಿ. ಆದರೆ, ಈ ವರ್ಷವೂ ಪಠ್ಯಪುಸ್ತಕ ಮತ್ತು ಸಮವಸ್ತ್ರದ ಸಮಸ್ಯೆ ತಲೆದೋರಿದೆ.

ರಾಜ್ಯದಾದ್ಯಂತ ಇಲ್ಲಿಯವರೆಗೆ ಶೇ. 61ರಷ್ಟು ಪಠ್ಯಪುಸ್ತಕಗಳು ಮಾತ್ರ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಕಚೇರಿಗಳಿಗೆ ತಲುಪಿವೆ. ಅವು ಶಾಲೆಗಳನ್ನು ತಲುಪಿ ಅಲ್ಲಿಂದ ಮಕ್ಕಳ ಕೈಗೆ ಬರುವುದಕ್ಕೆ ಇನ್ನೂ ಸಾಕಷ್ಟು ಸಮಯ ಹಿಡಿಯುತ್ತದೆ. ಉಳಿದ ಶೇ. 39ರಷ್ಟು ಪಠ್ಯಪುಸ್ತಕಗಳನ್ನು ಕೇವಲ ಒಂದು ವಾರದಲ್ಲಿ ತಲುಪಿಸಲು ಸಾಧ್ಯವೇ ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಮತ್ತೊಂದೆಡೆ, ಈ ಮೊದಲು ಮಕ್ಕಳಿಗೆ ವರ್ಷದಲ್ಲಿ ಒಂದು ಜೊತೆ ಸಮವಸ್ತ್ರವನ್ನು ಶಿಕ್ಷಣ ಇಲಾಖೆಯೇ ಹೊಲಿಸಿ ಕೊಡುತ್ತಿತ್ತು. ಉಳಿದ ಒಂದು ಜೊತೆ ಸಮವಸ್ತ್ರಕ್ಕೆ ಬಟ್ಟೆಯನ್ನು ವಿತರಿಸಿ ಪಾಲಕರು ಹೊಲಿಸಿಕೊಳ್ಳುವಂತೆ ತಿಳಿಸುತ್ತಿತ್ತು. ಕಳೆದ 2 ವರ್ಷಗಳಿಂದ ಇಲಾಖೆ ಬಟ್ಟೆಯನ್ನು ಮಾತ್ರ ವಿತರಿಸುತ್ತಿದೆ. ಹೊಲಿಗೆ ವೆಚ್ಚವನ್ನೂ ಪಾಲಕರೇ ಪಾವತಿಸಬೇಕಿದೆ. ಮಕ್ಕಳಿಗೆ ಅಳತೆಗೆ ತಕ್ಕಂತೆ ಬಟ್ಟೆ ಸಾಲದಾದರೆ, ಮತ್ತೆ ತಾಂತ್ರಿಕ ಕಾರಣಗಳಿಂದ ಸಮಸ್ಯೆ ಹಾಗೆಯೇ ಉಳಿಯುತ್ತದೆ. ಕೆಲವು ಮಕ್ಕಳು ಸ್ಥೂಲ ಕಾಯ ಹೊಂದಿರುವುದರಿಂದ, ಬಟ್ಟೆ ಸಾಲುವುದಿಲ್ಲ. ಇವೆಲ್ಲ ಮೇಲ್ನೋಟಕ್ಕೆ ಸಣ್ಣ ವಿಷಯಗಳೆನಿಸಿದರೂ ಮಹತ್ವದ ಸಂಗತಿಗಳಾಗಿವೆ.

ಇನ್ನು ಶಿಕ್ಷಕರ ಅಭಾವವೂ ಪ್ರತಿ ವರ್ಷದ ತೊಂದರೆ. ರಾಜ್ಯದಲ್ಲಿ 41,905 ಪ್ರಾಥಮಿಕ ಮತ್ತು 4,871 ಪ್ರೌಢ ಶಾಲೆ ಸೇರಿ ಒಟ್ಟು 46,776 ಶಾಲೆಗಳು ಇವೆ. ಪ್ರಾಥಮಿಕ ಶಾಲೆಗಳಿಗೆ 49,729 ಹುದ್ದೆಗಳು ಹಾಗೂ ಪ್ರೌಢಶಾಲೆಗಳಲ್ಲಿ 11,796 ಹುದ್ದೆಗಳು ಸೇರಿ 61,525 ಶಿಕ್ಷಕರ ಕೊರತೆ ಇದೆ. ಶಾಲೆ ಆರಂಭವಾಗುವಷ್ಟರಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಈ ಕಾರ್ಯದಲ್ಲಿಯೂ ಸರ್ಕಾರ ಇನ್ನೂ ಎಚ್ಚರಗೊಂಡಿಲ್ಲ. ಹಳ್ಳಿಗಳ ಶಾಲೆಗಳಲ್ಲಿ ಇನ್ನೂ ಮುರುಕಲು ಕಟ್ಟಡದಲ್ಲಿಯೇ ಮಕ್ಕಳು ಕಲಿಯುವಂತಾಗಿದೆ.

ಈ ಎಲ್ಲ ಸಮಸ್ಯೆಗಳು ದಿಢೀರ್ ಎದುರಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗಳ ಪರಿಹಾರ ವಿಳಂಬವಾಗುತ್ತಿದೆ. ಏಕೆಂದರೆ, 2023ರಲ್ಲಿ ಇದೇ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತೆಗೆದುಕೊಂಡಿದ್ದ ಮುಂಜಾಗ್ರತೆಯಿಂದ ಮೇ-ಜೂನ್​ಗೆ ತಲುಪಬೇಕಿದ್ದ ಪಠ್ಯಪುಸ್ತಕಗಳು ಏಪ್ರಿಲ್ ವೇಳೆಗೇ ಶಾಲೆಗೆ ತಲುಪಿದ್ದವು. ಮೇ 15ರ ವೇಳೆಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿತ್ತು. ಸಮವಸ್ತ್ರದ ವಿಷಯದಲ್ಲಿಯೂ ಎಚ್ಚರ ವಹಿಸಿ ಟೆಂಡರ್ ಕಾರ್ಯಗಳನ್ನು ಮುಗಿಸಲಾಗಿತ್ತು. ಈ ಕಾರ್ಯವನ್ನು ಪ್ರತಿ ವರ್ಷವೂ ಮಾಡಿದರೆ, ಮಕ್ಕಳು, ಪಾಲಕರಿಗೆ ತೊಂದರೆಯೇ ಆಗುವುದಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸುವುದು ಒಳಿತು.