ನೈತಿಕ ಪೊಲೀಸರ ಕಸ್ಟಡಿಯಲ್ಲಿದ್ದ ಯುವತಿಯೊಬ್ಬಳ ಸಾವಿನ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಇರಾನ್ನ ಹಲವಾರು ನಗರಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದರಿಂದ ನಾಲ್ವರು ಪುರುಷರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಕೇಂದ್ರಿತ ಮಾನವ ಹಕ್ಕುಗಳ ಸಂಘಟನೆಗಳು ಹೇಳಿವೆ.
ಮಹ್ಸಾ ಅಮಿನಿ ಎಂಬ 22 ವರ್ಷದ ಯುವತಿ ಸೆ. 13ರಂದು ಇರಾನ್ ರಾಜಧಾನಿ ಟೆಹರಾನ್ಗೆ ಆಗಮಿಸಿದ್ದರು. ಮಹಿಳೆಯರು ತಮ್ಮ ಕೂದಲನ್ನು ಮುಚ್ಚಬೇಕು ಮತ್ತು ಸಡಿಲವಾದ ನಿಲುವಂಗಿಯನ್ನು ಧರಿಸಬೇಕು ಎಂಬ ಅಂಶಗಳಿರುವ ಇರಾನ್ನ ಹಿಜಾಬ್ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ಆಗ ಅವರನ್ನು ಬಂಧಿಸಲಾಗಿತ್ತು. ಸೆ. 16ರಂದು ಅವರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಒಂದು ಡಜನ್ಗೂ ಹೆಚ್ಚಿನ ನಗರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಬಹುತೇಕ ಮಹಿಳೆಯರೇ ಇವುಗಳ ನೇತೃತ್ವ ವಹಿಸಿದ್ದಾರೆ. ರಾಜಧಾನಿ ಟೆಹರಾನ್ನ ವಿಶ್ವವಿದ್ಯಾನಿಲಯ ಕ್ಯಾಂಪಸ್ಗಳಲ್ಲೂ ಈ ಪ್ರತಿಭಟನೆ ವ್ಯಾಪಿಸಿದೆ. ಉನ್ನತ ಶಿಕ್ಷಣದಿಂದ ಜೀವಮಾನಪೂರ್ತಿ ನಿಷೇಧಕ್ಕೆ ಕಾರಣವಾಗಬಹುದಾದ ಬಂಧನದ ಭಯವಿದ್ದರೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಪುರುಷರ ಸಾಥ್: ಹಿಜಾಬ್ ಕಾನೂನನ್ನು ಪ್ರತಿಭಟಿಸಲು ಹಲವಾರು ಮಹಿಳೆಯರು ತಲೆಯ ಹೊದಿಕೆಗಳನ್ನು ಕಿತ್ತು ಸುಟು ್ಟ ಹಾಕಿದ ವಿಡಿಯೋಗಳನ್ನು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದೆ. ಪುರುಷರು ಕೂಡ ಈ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಇರಾನ್ ಪತ್ರಕರ್ತರು ಹಂಚಿಕೊಂಡಿರುವ ವಿಡಿಯೋಗಳ ಪ್ರಕಾರ, ರಾಜಧಾನಿಯಲ್ಲಿ ಭದ್ರತಾ ಪಡೆಗಳು ಗುಂಡು ಹಾರಿಸಿವೆ; ಜಲಫಿರಂಗಿ ಪ್ರಯೋಗಿಸಿವೆ. ಮಹ್ಸಾ ಅಮಿನಿಯ ತವರು ಪ್ರಾಂತ್ಯವಾದ ಕುರ್ದಿಸ್ತಾನದ ವಾಯವ್ಯದಲ್ಲಿ ಶನಿವಾರ ಅವರ ಅಂತ್ಯಕ್ರಿಯೆಯ ನಂತರ ಪ್ರತಿಭಟನೆಗಳು ತೀವ್ರಗೊಂಡಿವೆ. ಮೂರು ನಗರಗಳಲ್ಲಿ ಪ್ರತಿಭಟನಾನಿರತ ನಾಲ್ವರು ಪುರುಷರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಕುರ್ದಿಸ್ತಾನ್ ಮಾನವ ಹಕ್ಕುಗಳ ಗುಂಪು ಹೇಳಿದ್ದು, ಅವರ ಹೆಸರು ಮತ್ತು ಫೋಟೋಗಳನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದೆ. ಮೂರು ಮಕ್ಕಳು ಸೇರಿದಂತೆ 85 ಜನರು ಗಾಯಗೊಂಡಿದ್ದಾರೆ. 200 ಜನರನ್ನು ಬಂಧಿಸಲಾಗಿದೆ ಎಂದೂ ಅದು ಹೇಳಿದೆ.
ಮೌಲ್ವಿಗಳಿಂದಲೂ ಬೆಂಬಲ: ಹಿರಿಯ ಮೌಲ್ವಿಗಳು ಮತ್ತು ಸರ್ಕಾರದ ಬೆಂಬಲಿಗರು ಸಹ ನೈತಿಕ ಪೊಲೀಸ್ಗಿರಿಯನ್ನು ರದ್ದುಗೊಳಿಸಬೇಕೆಂದು ಕರೆ ನೀಡಿದ್ದಾರೆ. ಅಲ್ಲದೆ, ಧಾರ್ವಿುಕ ನಿಯಮಗಳನ್ನು ಜಾರಿಗೊಳಿ ಸುವ ಸಾಧನವಾಗಿ ಸರ್ಕಾರವು ಹಿಂಸಾಚಾರ ಪ್ರಯೋಗಿಸು ವುದನ್ನು ಖಂಡಿಸಿದ್ದಾರೆ. ಪವಿತ್ರ ನಗರವಾದ ಕೋಮ್ ಪ್ರಮುಖ ಶಿಯಾ ಧಾರ್ವಿುಕ ಮುಖಂಡ ಗ್ರಾ್ಯಂಡ್ ಅಯತೊಲ್ಲಾ ಅಸಾದೊಲ್ಲಾ ಬಯಾತ್-ಜಂಜಾನಿ ಅವರು ಅಮಿನಿ ಸಾವಿಗೆ ಕಾರಣವಾದ ಭದ್ರತಾ ಪಡೆಗಳ ಕೃತ್ಯವನ್ನು ಖಂಡಿಸಿದ್ದಾರೆ.
ಉಗ್ರ ರೂಪದ ಕಾನೂನುಗಳು: ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ನ ಸಂವಿಧಾನ ಪ್ರಕಾರ ಈ ದೇಶದ ಅಧಿಕೃತ ಧರ್ಮ ಶಿಯಾ ಇಸ್ಲಾಂ ಆಗಿದೆ. ಈ ದೇಶದ ಇಸ್ಲಾಮಿಕ್ ಕಾನೂನುಗಳು ಉಗ್ರ ಸ್ವರೂಪದ್ದಾಗಿವೆ. ಸಲಿಂಗಕಾಮಿ ನಡವಳಿಕೆ, ವ್ಯಭಿಚಾರ ಮತ್ತು ವಿವಾಹೇತರ ಲೈಂಗಿಕತೆಯು ಕಾನೂನುಬಾಹಿರವಾಗಿದ್ದು, ಇದಕ್ಕೆ ಮರಣದಂಡನೆ ವಿಧಿಸಬಹುದಾಗಿದೆ. ಮದ್ಯವನ್ನು ವ್ಯಾಪಾರ ಮಾಡುವುದನ್ನು ಮತ್ತು ಕುಡಿಯು ವುದನ್ನು ನಿಷೇಧಿಸಲಾಗಿದೆ. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನಿನ ಮಹಿಳೆಯರು ಮತ್ತು 9 ವರ್ಷಕ್ಕಿಂತ ಮೇಲಿನ ಬಾಲಕಿಯರು ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಟಿವಿ ಮತ್ತು ರೆಡಿಯೋದಲ್ಲಿ ಸಂಗೀತವನ್ನು ನಿಷೇಧಿಸ ಲಾಗಿದೆ. ಅಯತೊಲ್ಲಾ ಖೊಮೇನಿ ಅವರು ಸಂಗೀತವನ್ನು ಅಫೀಮಿನೊಂದಿಗೆ ಹೋಲಿಸಿದ್ದು, ಇದು ಮನಸ್ಸನ್ನು ನಿಷ್ಕ್ರಿಯ ಮತ್ತು ಪ್ರಜ್ಞಾಹೀನಗೊಳಿಸುತ್ತದೆ ಎಂದಿದ್ದಾರೆ.
ಅಧಿಕಾರಿಗಳಿಂದ ಒತ್ತಡ: ಮಹ್ಸಾ ಅಮಿನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ನೈತಿಕ ಪೊಲೀಸರು ಹೇಳಿದ್ದಾರೆ. ಬಂಧನ ಕೇಂದ್ರಕ್ಕೆ ವ್ಯಾನ್ನಲ್ಲಿ ಕರೆದೊಯ್ಯುವಾಗ ತಲೆಗೆ ಪೆಟ್ಟುಬಿದ್ದಿದೆ ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ. ಆದರೆ, ಅಮಿನಿ ಸಂಪೂರ್ಣ ಆರೋಗ್ಯವಾಗಿದ್ದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಭದ್ರತಾ ಅಧಿಕಾರಿಗಳು ಶವಪರೀಕ್ಷೆ ವರದಿಯನ್ನು ತಮಗೆ ನೀಡಿಲ್ಲ; ಮಧ್ಯರಾತ್ರಿಯಲ್ಲಿ ಸಮಾಧಿ ಮಾಡಲು ಒತ್ತಡ ಕೂಡ ಹೇರಿದ್ದರು ಎಂದು ಅವರು ಆರೋಪಿಸಿದ್ದಾರೆ.
ಇರಾನ್ನಲ್ಲಿ ನೈತಿಕ ಪೊಲೀಸ್ಗಿರಿಯನ್ನು ತೆಗೆದುಹಾಕುವುದು ಬಹುತೇಕ ಅಸಾಧ್ಯ ಎಂಬಂಥ ಪರಿಸ್ಥಿತಿ ಇದೆ. ಹಿಜಾಬ್ ಕಾನೂನು ಮಹಿಳೆಯರನ್ನು ಕಾರಣವಿಲ್ಲದೆ ಭಯಭೀತಗೊಳಿಸುವ ಸಾಧನವಾಗಿದೆ. | ರೋಯಾ ಬೋರೌಮಂಡ್ ಮಾನವ ಹಕ್ಕುಗಳ ಹೋರಾಟಗಾರ
ಹಿಜಾಬ್ ಕಾನೂನು ರದ್ದತಿಗೆ ಒತ್ತಾಯ: ಇರಾನ್ನ ಪ್ರಮುಖ ಸುಧಾರಣಾವಾದಿ ರಾಜಕೀಯ ಪಕ್ಷವಾದ ಹೆಜ್ಬ್-ಐ ಎಟೆಮಾಡ್-ಐ ಮೆಲ್ಲಿ, ನೈತಿಕ ಪೊಲೀಸ್ಗಿರಿ ಕೊನೆಗೊಳಿಸಲು; ಹಿಜಾಬ್ ಕಾನೂನನ್ನು ರದ್ದುಗೊಳಿಸಬೇಕೆಂದೂ ಒತ್ತಾಯಿಸಿದೆ. ಇರಾನ್ನಲ್ಲಿ ಈ ರೀತಿ ಆಗ್ರಹ ಮಾಡಿರುವ ಮೊಟ್ಟಮೊದಲ ರಾಜಕೀಯ ಪಕ್ಷ ಇದಾಗಿದೆ.
ಹತ್ತು ವರ್ಷ ಜೈಲು: ಹಿಜಾಬ್ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ 35ಕ್ಕೂ ಹೆಚ್ಚು ಮಹಿಳೆಯರನ್ನು ಟೆಹರಾನ್ನಲ್ಲಿ 2017ರ ಡಿಸೆಂಬರ್ನಲ್ಲಿ ಬಂಧಿಸಿ, 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 2018ರಲ್ಲಿ ನೈತಿಕ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು, ಸಡಿಲವಾದ ಹೆಡ್ಸ್ಕಾರ್ಫ್ ಧರಿಸಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದರು.
ಏನಿದು ನೈತಿಕ ಪೊಲೀಸ್ ಘಟಕ?: ಇರಾನ್ ಇಸ್ಲಾಮಿಕ್ ಗಣರಾಜ್ಯದಲ್ಲಿ, ನೈತಿಕ ಪೊಲೀಸ್ ಘಟಕಗಳು ವಸ್ತ್ರಸಂಹಿತೆಯನ್ನು ಜಾರಿಗೊಳಿಸುವ ಅಧಿಕಾರ ಹೊಂದಿವೆ. ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ತಲೆಗೆ ಸ್ಕಾರ್ಫ್ ಧರಿಸಬೇಕು. ಬಿಗಿಯಾದ ಪ್ಯಾಂಟ್, ಸೀಳಿರುವ ಜೀನ್ಸ್, ಮೊಣಕಾಲುಗಳನ್ನು ತೋರಿಸುವ ಮತ್ತು ಗಾಢ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ಸವೋಚ್ಚ ನಾಯಕನ ವಿರುದ್ಧ ಘೋಷಣೆ: ಸೋಮವಾರ ನಡೆದ ಅನೇಕ ಪ್ರತಿಭಟನೆಗಳು ಆಡಳಿತಕೇಂದ್ರವನ್ನೇ ಗುರಿಯಾಗಿಸಿಕೊಂಡಿವೆ ಎನ್ನಲಾಗಿದೆ. ಇರಾನ್ನ ಸವೋಚ್ಚ ನಾಯಕ ಅಯತೊಲ್ಲಾ ಖೊಮೇನಿ ಸಾವನ್ನಪ್ಪಲಿ ಹಾಗೂ ಅವರ ರಾಜಕೀಯ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿರುವ ಅವರ ಪುತ್ರ ಮೊಜ್ತಾಬಾ ಪತನಗೊಳ್ಳಲಿ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಖಮೇನಿ ಅವರು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.