ಕೋಲಾರ: ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ-75 ಚುಂಚದೇನಹಳ್ಳಿ ಗೇಟ್ ಸಮೀಪ ಭಾನುವಾರ ಮಧ್ಯರಾತ್ರಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಕೋಲಾರ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಕೆ.ಕಾಂತರಾಜ್ ಹಾಗೂ ಪಿಎಸ್ಐ ವಿ.ಭಾರತಿ ರಕ್ಷಿಸಿದ್ದಾರೆ.
ಮಧ್ಯರಾತ್ರಿ 1.15 ಗಂಟೆ ಸುಮಾರಿನಲ್ಲಿ ಪಿಎಸ್ಐ ಭಾರತಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಚುಂಚದೇನಹಳ್ಳಿ ಗೇಟ್ ರಸ್ತೆಯ ಪಕ್ಕದಲ್ಲಿ ತಾಲೂಕಿನ ಮಲ್ಲಸಂದ್ರ ನಿವಾಸಿ ನಾಗೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಗಮನಿಸಿ ಕೂಡಲೇ ಇನ್ಸ್ಪೆಕ್ಟರ್ ಕಾಂತರಾಜ್ಗೆ ಮಾಹಿತಿ ನೀಡಿದ್ದಾರೆ. ನಗರಠಾಣೆಯ ಇನ್ಸ್ಪೆಕ್ಟರ್ ಎಂ.ಸದಾನಂದ ಜತೆ ಕಾಂತರಾಜ್ ಸ್ಥಳಕ್ಕೆ ಭೇಟಿ ಕೂಡಲೇ ನಗರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ನಾಗೇಶ್, ಏಳೆಂಟು ವರ್ಷಗಳ ಹಿಂದೆ ವಾನರಾಶಿ ಗ್ರಾಮದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಇದರಿಂದ ಯುವತಿ ಕುಟುಂಬದ ನಡುವೆ ಮನಸ್ತಾಪವಿತ್ತು. ಆದ್ದರಿಂದಲೇ ನನ್ನನ್ನು ಕೊಲೆ ಮಾಡಲು ಪತ್ನಿಯ ಕುಟುಂಬದವರು ಸಂಚು ರೂಪಿಸಿ, ರಮೇಶ್ ಎಂಬಾತನಿಗೆ ಮದ್ಯಪಾನ ಮಾಡಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ಕೂಡಲೇ ನಾನು ಸತ್ತು ಹೋಗಿದ್ದೆಂದು ತಿಳಿದು ಸ್ಥಳದಿಂದ ಹಲ್ಲೆಕೋರರು ಹೊರಟು ಹೋಗಿದ್ದಾರೆ ಎಂದು ಗಾಯಾಳು ನಾಗೇಶ್ ಪೊಲೀಸರಿಗೆ ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದವನ ಜೀವ ಉಳಿಸಿದ ಖುಷಿ ಇದೆ. ಇದು ನಮ್ಮ ವೃತ್ತಿ ಜೀವನದಲ್ಲಿ ಹೆಮ್ಮೆಯ ವಿಚಾರ. ಆರೋಪಿ ರಮೇಶ್ ಬಂಧನಕ್ಕೆ ತನಿಖೆ ನಡೆಸುತ್ತಿದ್ದೇವೆ ಎಂದು ಇನ್ಸ್ಪೆಕ್ಟರ್ ಕಾಂತರಾಜ್ ತಿಳಿಸಿದರು.