ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮ ಜಾಲತಾಣಗಳಲ್ಲಿ ಅಶ್ಲೀಲ ವಿಚಾರಗಳು ಪ್ರಸಾರವಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ‘ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಡಿಜಿಟಲ್ ಕಂಟೆಂಟ್ ಕಡಿವಾಣಕ್ಕೆ ತಾನೇ ಮಧ್ಯಪ್ರವೇಶ ಮಾಡಬೇಕಾದೀತು’ ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದೆ. ‘ಯೂಟ್ಯೂಬ್ ವಾಹಿನಿಗಳಲ್ಲಿ ಅಶ್ಲೀಲ ಸಂಗತಿಗಳ ವಿಚಾರದ ಮಹತ್ವ ಮತ್ತು ಸೂಕ್ಷ್ಮತೆಯನ್ನು ನಿರ್ಲಕ್ಷಿಸಬಾರದು’ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರ ಪೀಠ ಹೇಳಿದೆ.
ರಿಯಾಲಿಟಿ ಶೋದಲ್ಲಿ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ನೀಡಿರುವ ಹೇಳಿಕೆಗಳು ತೀರಾ ಆಕ್ಷೇಪಾರ್ಹ ಹಾಗೂ ಅವಮಾನಕರ ಎಂದು ಪೀಠ ತೀವ್ರವಾಗಿ ಟೀಕಿಸಿದೆ. ಆ ಹೇಳಿಕೆಗಳಿಂದಾಗಿ, ‘ಆತನ ಹೆತ್ತವರು ನಾಚಿಕೆಪಟ್ಟಿರಬೇಕು. ಸಮಾಜಕ್ಕೆ ನಾಚಿಕೆಯಾಗಿರಬೇಕು. ಆತನ ತಲೆಯಲ್ಲಿ ಏನೋ ಭಾರಿ ಕೊಳಕಿದ್ದು ತನ್ನ ಕಾರ್ಯಕ್ರಮದಲ್ಲಿ ಅದನ್ನು ಕಕ್ಕಿದ್ದಾನೆ’ ಎಂದು ಕೋರ್ಟ್ ಖಾರವಾಗಿ ಹೇಳಿದೆ. ಈ ಸಮಸ್ಯೆ ಒಂದು ಪ್ರಕರಣ ಅಥವಾ ಒಂದು ಘಟನೆಗೆ ಸೀಮಿತವಾಗಿ ಉಳಿದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿನ ಆಶ್ಲೀಲ ಕಂಟೆಂಟ್ಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗಿ ಕಾಡುತ್ತಿವೆ. ಹದಿಹರೆಯದವರು, ಯುವಜನರು ದಾರಿ ತಪ್ಪುತ್ತಿದ್ದಾರೆ. ಹಾಸ್ಯ, ತಮಾಷೆಯ ಹೆಸರಲ್ಲಿ ತೀರಾ ಕೊಳಕು ಸಂಗತಿಗಳನ್ನು ನೀಡಲಾಗುತ್ತಿದ್ದು, ದುರದೃಷ್ಟವಶಾತ್ ಹಲವು ಯೂಟ್ಯೂಬರ್ಗಳು ಇದನ್ನೇ ಪ್ರಸಿದ್ಧಿಗಾಗಿ ಬಳಸಿಕೊಳ್ಳುತ್ತಿದ್ದಾರೆ.
ಹೈಸ್ಕೂಲ್ ಮಕ್ಕಳಿಂದ ಹಿಡಿದು 35 ವರ್ಷದವರೆಗಿನ ಯುವಕ-ಯುವತಿಯರು ನೋಡಬಾರದ್ದನ್ನು ನೋಡುತ್ತ, ಕೇಳಬಾರದ್ದನ್ನು ಕೇಳುತ್ತ ಮನಸ್ಸನ್ನು ವಿಕೃತಗೊಳಿಸಿಕೊಳ್ಳುತ್ತಿದ್ದಾರೆ. ಸುಜ್ಞಾನ, ನೈತಿಕ ಮೌಲ್ಯಗಳಿಂದ ಮನಸ್ಸನ್ನು ಅರಳಿಸಿಕೊಂಡು, ಸುಂದರ ಬದುಕು ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ಅಶ್ಲೀಲ ಕಂಟೆಂಟ್ಗಳ ಸಹವಾಸಕ್ಕೆ ಬಿದ್ದು ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಯೂಟ್ಯೂಬ್ ವಾಹಿನಿ ನಡೆಸುವವರು ಜವಾಬ್ದಾರಿಯಿಂದ, ವಿವೇಚನೆಯಿಂದ ಮಾತನಾಡಬೇಕು. ಹಾಸ್ಯದ ಹೆಸರಿನಲ್ಲಿ ಏನೇನನ್ನೋ ಸಮಾಜಕ್ಕೆ ನೀಡಿದರೆ ರಣವೀರ್ಗೆ ಇಂದು ಉದ್ಭವವಾಗಿರುವ ಸ್ಥಿತಿಯೇ ಸೃಷ್ಟಿಯಾಗುತ್ತದೆ.
ಸಾಮಾಜಿಕ ಜಾಲತಾಣಗಳಿಗೆ ನಿರ್ದಿಷ್ಟ ಚೌಕಟ್ಟು ಮತ್ತು ಮೇಲ್ವಿಚಾರಣೆ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆ ಹೀಗೆ ಮುಂದುವರಿಯಲು ಬಿಟ್ಟರೆ ಮುಂದೆ ಮತ್ತಷ್ಟು ಭಯಾನಕ ಸ್ವರೂಪ ತಳೆಯುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ, ಸುಪ್ರೀಂ ಕೋರ್ಟ್ನ ಗಂಭೀರ ಎಚ್ಚರಿಕೆಯ ಬಳಿಕವಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಸಾಮಾಜಿಕ ಜಾಲತಾಣಗಳ ಶುದ್ಧೀಕರಣಕ್ಕೆ ಸೂಕ್ತ ನೀತಿ ರೂಪಿಸಬೇಕು.