ಬೆಂಗಳೂರು: ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವ ಗಲಭೆಕೋರರಿಂದಲೇ ನಷ್ಟ ವಸೂಲಿ ಮಾಡುವ ಸಂಬಂಧ ಉತ್ತರಪ್ರದೇಶ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಹಾನಿ ಎಸಗುವ ಪುಂಡರಿಂದಲೇ ನಷ್ಟ ಭರಿಸಿಕೊಳ್ಳಲು ಉತ್ತರ ಪ್ರದೇಶ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿತ್ತು. ಆದರೆ ರಾಜ್ಯ ಸರ್ಕಾರ ಹೊಸ ಕಾನೂನು ರಚನೆ ಸಲುವಾಗಿ ಕಾಲಹರಣ ಮಾಡದೆ, ಸವೋಚ್ಚ ನ್ಯಾಯಾಲಯದ ತೀರ್ಪನ್ನೇ ಆಧಾರವಾಗಿ ಬಳಸಿಕೊಂಡು ಕ್ಷಿಪ್ರ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವ ಬಗ್ಗೆ ಚರ್ಚೆ ನಡೆಸಿದರು. ಸುಗ್ರೀವಾಜ್ಞೆ ಹೊರಡಿಸಬೇಕೆ ಎಂಬ ಬಗ್ಗೆ ಅಧಿಕಾರಿಗಳು ಕಾನೂನು ತಜ್ಞರೊಂದಿಗೂ ಚರ್ಚೆ ನಡೆಸಿದಾಗ ಸುಪ್ರೀಂಕೋರ್ಟ್ ತೀರ್ಪು ಸಾಕೆಂಬ ಅಭಿಪ್ರಾಯ ವ್ಯಕ್ತವಾಯಿತು.
ಕಳೆದ ವರ್ಷ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬಳಿಕ ದೇಶಾದ್ಯಂತ ಗಲಭೆ ಸೃಷ್ಟಿಯಾಗಿತ್ತು. ಉತ್ತರ ಪ್ರದೇಶದಲ್ಲೂ ಸಾರ್ವಜನಿಕ ಆಸ್ತಿ ಪಾಸ್ತಿಗೆ ಬೆಂಕಿ ಇಡಲಾಗಿತ್ತು. ಪುಂಡರ ವಿರುದ್ಧ ತಕ್ಷಣ ಕ್ರಮಕ್ಕೆ ಮುಂದಾದ ಯೋಗಿ ಆದಿತ್ಯನಾಥ ಸರ್ಕಾರ, ಆಸ್ತಿ ಹಾನಿ ಮಾಡಿದವರಿಂದಲೇ ನಷ್ಟ ತುಂಬಿಕೊಳ್ಳಲು ಕಾನೂನಿನ ಅಸ್ತ್ರವನ್ನು ಪ್ರಯೋಗಿಸಿತ್ತು. ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ: ಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್ ಬಿಜೆಪಿ ಅಭಿಮಾನಿ ಎಂದ ಡಿ.ಕೆ.ಶಿವಕುಮಾರ್
ಬುಧವಾರ ದೆಹಲಿಯಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಕರೆ ಮಾಡಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಡಿಜೆ ಹಳ್ಳಿ ಪ್ರಕರಣದಲ್ಲಿ ಪೊಲೀಸ್ ಠಾಣೆಯಿಂದ ಹಿಡಿದು ಸರ್ಕಾರಿ ವಾಹನ ಹಾಗೂ ಜನ ಸಾಮಾನ್ಯರ ಆಸ್ತಿಪಾಸ್ತಿ ನಷ್ಟವಾಗಿದೆ, ತಪ್ಪಿತಸ್ಥರ ವಿರುದ್ಧ ಈಗ ತೆಗೆದುಕೊಳ್ಳುವ ಕ್ರಮ ಮುಂದಿನ ದಿನಗಳಲ್ಲಿ ಮಾದರಿಯಾಗಿರಬೇಕು. ಅದೇ ರೀತಿ ತಪ್ಪಿತಸ್ಥರಿಗೆ ಪಾಠ ಕಲಿಸಬೇಕೆಂದು ಕಿವಿಮಾತು ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ದಂಗೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ‘ಡಿ.ಜೆ.ಹಳ್ಳಿ ಗಲಭೆಕೋರರು ಇನ್ಮುಂದೆ ಕನಸು-ಮನಸಲ್ಲೂ ಇಂಥ ಕೆಲಸ ಮಾಡದಂಥ ಪಾಠ ಕಲಿಸುತ್ತೇವೆ…’
ಉ.ಪ್ರದೇಶ ಮಾದರಿ: 2019ರಲ್ಲಿ ಉತ್ತರ ಪ್ರದೇಶದಲ್ಲಿ ಸಂಭವಿಸಿದ ಗಲಭೆಗಳಿಗೆ ಕಾರಣರಾದವರ ಆಸ್ತಿಪಾಸ್ತಿಯನ್ನು ಯೋಗಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಈ ತೀಮಾನದಿಂದ ಲಖನೌ ಒಂದರಲ್ಲೇ 50 ಗಲಭೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಒಂದೂವರೆ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಳ್ಳುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದರು. ಇಂಥದ್ದೇ ಕಾನೂನನ್ನು ರಾಜ್ಯದಲ್ಲೂ ಜಾರಿ ಮಾಡಬೇಕೆಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ಸಂಪುಟದ ಕೆಲವು ಸಚಿವರೂ ಸೇರಿ ಬಿಜೆಪಿ ಮುಖಂಡರೂ ಸಹ ಇದೇ ಅಭಿಪ್ರಾಯ ನೀಡಿದ್ದಾರೆ. ಈ ಒತ್ತಡಕ್ಕೆ ಪೂರಕವಾಗಿ ಗೃಹ ಸಚಿವರೂ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಲಯದ ತೀರ್ಪಿನ ಅನ್ವಯ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ. ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ: ಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್ ಬಿಜೆಪಿ ಅಭಿಮಾನಿ ಎಂದ ಡಿ.ಕೆ.ಶಿವಕುಮಾರ್
ಸುಪ್ರೀಂ ಏನು ಹೇಳಿದೆ?: ಗಲಭೆಗಳು ನಡೆದು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದಾಗ ನಷ್ಟವನ್ನು ಕಿಡಿಗೇಡಿಗಳಿಂದ ವಸೂಲಿ ಮಾಡಲು ರಾಜ್ಯಗಳು ಕಾನೂನು ರೂಪಿಸಬೇಕು. ಕಾನೂನು ರೂಪಿಸುವುದು ತಡವಾದರೆ ಈ ತೀರ್ಪನ್ನೇ ಕಾನೂನು ಎಂದು ಪರಿಗಣಿಸಬಹುದೆಂದು ಸುಪ್ರಿಂ ಕೋರ್ಟ್ ಪ್ರಕರಣವೊಂದರ ಸಂದರ್ಭದಲ್ಲಿ ಆದೇಶ ನೀಡಿತ್ತು. ಅದೇ ಅಂಶವನ್ನು ಪಾಲಿಸಲು ಸರ್ಕಾರ ತೀರ್ಮಾನಿಸಿದೆ.