ನ್ಯೂಸ್

ವರ್ಷದಲ್ಲಿ 2 ಬಾರಿ ಪ್ರಾಧ್ಯಾಪಕರ ವರ್ಗ; ಹುದ್ದೆ ಮಾಹಿತಿ ಕೊಡುತ್ತಿಲ್ಲ ಎಂದು ಆಕ್ರೋಶ

Webdesk - Ravikanth

| ಎನ್.ಎಲ್.ಶಿವಮಾದು ಬೆಂಗಳೂರು

ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಕಾಲೇಜುಗಳ ಬೋಧಕ ವರ್ಗದ ವರ್ಗಾವಣೆ ಪ್ರಕ್ರಿಯೆ ಬಗ್ಗೆ ಪ್ರಾಧ್ಯಾಪಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಒಂದೇ ವರ್ಷದಲ್ಲಿ ಎರಡನೇ ಬಾರಿ ವರ್ಗಾವಣೆ ಆರಂಭಿಸಲಾಗಿದೆ. ವಿಷಯವಾರು ಎಲ್ಲೆಲ್ಲಿ, ಎಷ್ಟು ಹುದ್ದೆಗಳು ಖಾಲಿ ಉಳಿದಿವೆ ಎಂಬ ಮಾಹಿತಿ ಕೊಡದೆ ವರ್ಗಾವಣೆ ಪ್ರಕ್ರಿಯೆ ಶುರು ಮಾಡಿರುವುದು ಪ್ರಾಧ್ಯಾಪಕರಲ್ಲಿ ಹಲವು ಅನುಮಾನ ಮೂಡಿಸಿದೆ. ಖಾಲಿ ಇರುವ ಎಲ್ಲ ಹುದ್ದೆಗಳ ಮಾಹಿತಿ ಪ್ರಕಟಿಸಿ, ಪಾರದರ್ಶಕವಾಗಿ ಪ್ರಕ್ರಿಯೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿರುವ ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಸೋಮವಾರ (ಡಿ.26) ಕೌನ್ಸೆಲಿಂಗ್ ಆರಂಭವಾಗಲಿದೆ. ಆದರೆ, ಮನಬಂದಂತೆ ವರ್ಗಾವಣೆ ನಿಯಮಗಳನ್ನು ರೂಪಿಸುತ್ತಿರುವ ಇಲಾಖೆ ವಿರುದ್ಧ ಆಕ್ರೋಶ ಸ್ಪೋಟಗೊಂಡಿದೆ. ಪಾರದರ್ಶಕವಾಗಿ ಪ್ರಕ್ರಿಯೆ ನಡೆಸದಿದ್ದರೆ ಪ್ರಾಧ್ಯಾಪಕರು ವರ್ಗಾವಣೆ ಪ್ರಕ್ರಿಯೆಯನ್ನೇ ಬಹಿಷ್ಕರಿಸುವ ಎಚ್ಚರಿಕೆ ಕೊಟ್ಟಿದ್ದಾರೆ.

ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ಪ್ರಕ್ರಿಯೆ ಕೈಗೊಂಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಇಬ್ಬರಿಗೂ ಸಾಕಷ್ಟು ಸಮಸ್ಯೆ ಎದುರಾಗಿದೆ. ಗ್ರಾಮೀಣ ಭಾಗದ ಪ್ರಾಧ್ಯಾಪಕರು ವರ್ಗಾವಣೆಯಿಂದ ವಂಚಿತರಾಗುತ್ತಿದ್ದು, ಕೇವಲ ನಗರ ಪ್ರದೇಶದಲ್ಲಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇವೆಲ್ಲದರ ನಡುವೆ ಖಾಲಿ ಹುದ್ದೆಗಳ ಮಾಹಿತಿಯನ್ನು ಮುಚ್ಚಿಟ್ಟು ವರ್ಗಾವಣೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇಲಾಖೆಯ ಉತ್ತರ: ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ 7 ಸಾವಿರ ಕಾಯಂ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಶೇ.15 ಹುದ್ದೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಆ ಪ್ರಕಾರ 1,050 ಪ್ರಾಧ್ಯಾಪಕರಿಗೆ ಅವಕಾಶ ದೊರೆಯಲಿದೆ. ಇದರ ಹೊರತಾಗಿ 1,500 ಹುದ್ದೆಗಳು ಖಾಲಿ ಇವೆ. ವರ್ಗಾವಣೆ ಸಮಯದಲ್ಲಿ ಯಾರೊಬ್ಬರೂ ಗ್ರಾಮೀಣ ಭಾಗಕ್ಕೆ ವರ್ಗಾವಣೆಯಾಗಲು ಇಚ್ಛೆ ಪಡದ ಕಾರಣ ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಹುದ್ದೆಗಳು ಖಾಲಿ ಉಳಿಯಲಿವೆ. ಇದೇ ಕಾರಣಕ್ಕೆ ಶಿಕ್ಷಣ ಇಲಾಖೆಯು ಖಾಲಿ ಹುದ್ದೆಗಳ ಮಾಹಿತಿಯನ್ನು ಪ್ರದರ್ಶಿಸುತ್ತಿಲ್ಲ. ಅವಶ್ಯವಿರುವ ಹುದ್ದೆಗಳನ್ನಷ್ಟೇ ಮಾಹಿತಿ ನೀಡಲಾಗುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ತಿಳಿಸಿದ್ದಾರೆ.

ವಲಯಗಳ ಹಂಚಿಕೆ

  • ಎ ವಲಯ- ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ
  • ಬಿ ವಲಯ- ಬಿಡಿಎ ವ್ಯಾಪ್ತಿಯಲ್ಲಿರುವ ಪ್ರದೇಶ ಹಾಗೂ ನಗರಪಾಲಿಕೆ ಪ್ರದೇಶಗಳು
  • ಸಿ ವಲಯ- ಜಿಲ್ಲಾ ಕೇಂದ್ರಗಳು, ನಗರಸಭೆ ವ್ಯಾಪ್ತಿ ಪಟ್ಟಣಗಳು
  • ಡಿ ವಲಯ- ತಾಲ್ಲೂಕು ಕೇಂದ್ರಗಳು
  • ಇ ವಲಯ- ಹೋಬಳಿ ಮತ್ತು ಗ್ರಾಮೀಣ ಪ್ರದೇಶಗಳು
ಖಾಲಿ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಶಿಕ್ಷಣ ಇಲಾಖೆ ತೋರಿಸುತ್ತಿಲ್ಲ. ಒಂದು ವೇಳೆ ವರ್ಗಾವಣೆಗೆ ಲಭ್ಯವಿರುವ ಎಲ್ಲ ಹುದ್ದೆಗಳ ಮಾಹಿತಿ ನೀಡದಿದ್ದರೆ, ವರ್ಗಾವಣೆಯಲ್ಲಿ ಪ್ರಾಧ್ಯಾಪಕರು ಪಾಲ್ಗೊಳ್ಳಬೇಕೇ, ಬೇಡವೇ ಎಂಬುದರ ಬಗ್ಗೆ ನಿರ್ಧರಿಸಲಾಗುತ್ತದೆ. | ಮಂಜುನಾಥ ಅಧ್ಯಕ್ಷ, ಪದವಿ ಕಾಲೇಜು ಪ್ರಾಧ್ಯಾಪಕರ ಸಂಘ ಖಾಲಿ ಹುದ್ದೆಗಳ ಸಂಪೂರ್ಣ ಮಾಹಿತಿ ನೀಡುವುದರಿಂದ ಗ್ರಾಮೀಣ ಭಾಗದಲ್ಲಿರುವ ಹುದ್ದೆಗಳು ಭರ್ತಿಯಾಗುವುದಿಲ್ಲ. ಕೇವಲ ಮಹಾನಗರ ಪಾಲಿಕೆ, ಜಿಲ್ಲಾ ಕೇಂದ್ರಗಳಲ್ಲಿರುವ ಹುದ್ದೆಗಳು ಮಾತ್ರ ಭರ್ತಿಯಾಗಲಿವೆ. ಈ ಕಾರಣದಿಂದ ವರ್ಗಾವಣೆಗೆ ಲಭ್ಯವಿರುವ ಹುದ್ದೆಗಳನ್ನಷ್ಟೇ ಮಾಹಿತಿ ನೀಡಲಾಗುತ್ತಿದೆ. | ಪಿ. ಪ್ರದೀಪ್, ಕಾಲೇಜು ಶಿಕ್ಷಣ ಆಯುಕ್ತ

ಪ್ರಾಧ್ಯಾಪಕರ ಪ್ರಶ್ನೆಗಳೇನು?

  • ವರ್ಗಾವಣೆಗೆ ಒಟ್ಟಾರೆ ವಿಷಯವಾರು ಎಷ್ಟು ಹುದ್ದೆ ಇವೆ ಎಂಬ ಮಾಹಿತಿ ಕೊಡುತ್ತಿಲ್ಲ ಏಕೆ?
  • ಹತ್ತಾರು ವರ್ಷಗಳಿಂದ ಗ್ರಾಮೀಣ ಭಾಗದವರಿಗೆ ಆದ್ಯತೆ ಇಲ್ಲ ಏಕೆ?
  • ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆಗೊಳಿಸಿದರೆ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗಲ್ಲವೇ?
  • ಒಂದೇ ವರ್ಷದಲ್ಲಿ ಏಪ್ರಿಲ್ ಮತ್ತು ಡಿಸೆಂಬರ್ ಎರಡು ಬಾರಿ ವರ್ಗಾವಣೆ ಮಾಡಿದರೂ ವಲಯವಾರು ತಾರತಮ್ಯ ಏಕೆ?

ಇಂದಿನಿಂದ ಕೌನ್ಸೆಲಿಂಗ್: ವೇಳಾಪಟ್ಟಿ ಪ್ರಕಾರ ಸೋಮವಾರ (ಡಿ.26) ವಿಶೇಷ ಪ್ರಕರಣಗಳ ವರ್ಗಾವಣೆ ಕೌನ್ಸೆ ಲಿಂಗ್ ನಡೆಸಲಾಗುತ್ತಿದೆ. ಇದಾದ ನಂತರ ಡಿ.29ರಿಂದ ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ ಆರಂಭವಾಗಲಿದೆ.

ತಾರತಮ್ಯ ಏಕೆ?

  • 2021-22ನೇ ಸಾಲಿನ ವರ್ಗಾವಣೆಯನ್ನು 2022ರ ಏಪ್ರಿಲ್​ನಲ್ಲಿ ನಡೆಸಲಾಗಿದೆ. ಮತ್ತೆ 2022-23ನೇ ಸಾಲಿನ ವರ್ಗಾವಣೆಯನ್ನು ಈಗ ಡಿಸೆಂಬರ್​ನಲ್ಲಿ ನಡೆಸಲಾಗುತ್ತಿದೆ.
  • ಗ್ರಾಮೀಣ ಭಾಗದ ಪ್ರಾಧ್ಯಾಪಕರಿಗೆ (ಇ ವಲಯ) ಅವಕಾಶ ಸಿಗುತ್ತಿಲ್ಲ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ (ಬಿ ವಲಯ) ಪ್ರಾಧ್ಯಾಪಕರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.
  • ವಲಯವಾರು ವರ್ಗಾವಣೆ ತಾರತಮ್ಯ ದಿಂದಾಗಿ ಹತ್ತಾರು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಅಲ್ಲೇ ಉಳಿಯುವಂತಾಗಿದೆ.
  • ಒಂದೇ ವರ್ಷದಲ್ಲಿ ಎರಡು ಬಾರಿ ವರ್ಗಾವಣೆ ಪ್ರಕ್ರಿಯೆ ಕೈಗೊಂಡರೂ ಸಮಾನ ನ್ಯಾಯ ದೊರೆಯುತ್ತಿಲ್ಲ.