ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವಿನ ಕಾಳಗ ಯಾಕೋ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಕಾಟೇರ ಸಿನಿಮಾದ ಟೈಟಲ್ ಹಾಗೂ ಕತೆಯಿಂದ ಶುರುವಾದ ಈ ವಿವಾದವು ಈಗ ಮತ್ತೊಂದು ಹಂತ ತಲುಪಿದ್ದು, ಇಬ್ಬರ ನಡುವಿನ ವಾಕ್ಸಮರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ನಿರ್ಮಾಪಕ ಉಮಾಪತಿ ವಿರುದ್ಧ ದರ್ಶನ್ ಕಳಪೆ ಭಾಷೆ ಬಳಸಿದ ಬಳಿಕ ದರ್ಶನ್ ವಿರುದ್ಧ ಕೆಲವು ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿವೆ. ಇದೆಲ್ಲದರ ನಡುವೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲವನ್ನು ಕೆರಳಿಸಿದೆ.
ಡಿಸಿಎಂ ಭೇಟಿ ಬಳಿಕ ಮಾತನಾಡಿದ ಉಮಾಪತಿ, ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಲು ಬಂದಿದ್ದೆ ಅಷ್ಟೆ, ನಾನು ತಪ್ಪು ಮಾಡಿದ್ದರೆ ಸಾಹೇಬರು ಕರೆದು ಬುದ್ಧಿಹೇಳುತ್ತಿದ್ದರು. ಆದರೆ ಹಾಗೇನಿಲ್ಲ. ಕ್ಷೇತ್ರದ ವಿಷಯ ಹಾಗೂ ರಾಜಕೀಯದ ಕೆಲವು ವಿಷಯಗಳನ್ನು ಮಾತನಾಡಿದೆ, ಸಲಹೆಗಳನ್ನು ತೆಗೆದುಕೊಂಡೆ ಅಷ್ಟೇ ಎಂದು ಡಿ.ಕೆ. ಶಿವಕುಮಾರ್ ಭೇಟಿ ಕುರಿತು ತಿಳಿಸಿದ್ದಾರೆ.
ಇದನ್ನೂ ಓದಿ: 40% ಕಮಿಷನ್ ಆರೋಪ; ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್
ನಟ ದರ್ಶನ್ ಜೊತೆಗಿನ ಸಂಘರ್ಷದ ಕುರಿತು ಮಾತನಾಡಿದ ಉಮಾಪತಿ, ಸಮಾಜದಲ್ಲಿ ಹೆಸರಿರುವ ವ್ಯಕ್ತಿ ಸರಿಯಾಗಿ ನಡೆದುಕೊಳ್ಳಬೇಕಾಗುತ್ತದೆ. ದೇಹ ತೂಕ ಇದ್ದರೆ ಸಾಕಾಗುವುದಿಲ್ಲ, ಮಾತಿನಲ್ಲಿ ತೂಕವಿರಬೇಕಾಗುತ್ತದೆ. ಯಾರೇ ತಪ್ಪು ಮಾಡಿದರೂ ಅದು ತಪ್ಪಷ್ಟೇ. ನಾವು ಸಿನಿಮಾದಲ್ಲಿರುವವರು ಸಿನಿಮಾ ಮೂಲಕ ಸಂದೇಶ ಕೊಡಬೇಕು, ಇಂಥಹಾ ವಿವಾದಗಳಿಂದ ಸಂದೇಶ ಕೊಡಬಾರದು ಎಂದಿದ್ದಾರೆ.
ಅವರೆಲ್ಲ ಹೊಟ್ಟೆ ತುಂಬಿರೋರು, ನಾವು ಹಸಿದಿರೋರು. ಅವರು ಆ ರೀತಿ ಪದ ಬಳಕೆ ಮಾಡಬಾರದಿತ್ತು, ಅದು ಖಂಡಿತ ತಪ್ಪು. ನಾವು ಸಣ್ಣವರು, ಕೆಲಸ ಮಾಡಿಕೊಂಡು ಇರೋದು. ರಾಜ್ಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರು ಎಂದು ಕರೆದಿದ್ದರು. ಅವರು ಹಾಕಿದ ಆಲದ ಮರ ಇದು. ಎಲ್ಲರೂ ಹೇಳ್ತಿದ್ದರು, ದೊಡ್ಮನೆಗೊಂದು ಸಿನಿಮಾ ಮಾಡಿ ನಿಮಗೆ ಗೊತ್ತಾಗುತ್ತದೆ ಎಂದು. ಅದು ಈಗ ಗೊತ್ತಾಗುತ್ತಿದೆ ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.