ಎಷ್ಟೋ ಬಾರಿ ಸುಂದರವಾದ ಕನಸುಗಳನ್ನು ಕಾಣುತ್ತಿರುತ್ತೇವೆ. ಕನಸಿನಲ್ಲಿ ನಮಗೆ ಅಪಘಾತವಾಗುತ್ತದೆ. ಆ ಅಪಘಾತ ನಮ್ಮನ್ನು ಕನಸಿನಿಂದ ಎಚ್ಚರಗೊಳಿಸುತ್ತದೆ. ಅದೇ ರೀತಿಯಲ್ಲಿ ನಮ್ಮ ಜೀವನದಲ್ಲಿ ಘಟಿಸುವ ಸಮಸ್ಯೆಗಳು (problems), ಪೆಟ್ಟುಗಳು, ತಾಪತ್ರಯಗಳು ನಮ್ಮನ್ನು ಎಬ್ಬಿಸುತ್ತವೆ. ಸಮಸ್ಯೆಗಳನ್ನು ನಾವು ಹೇಗೆ ನೋಡುತ್ತೇವೆಯೋ ಅದರ ಮೇಲೆ ನಮ್ಮ ಜೀವನ ನಿರ್ಧಾರವಾಗುತ್ತದೆ. ‘ನನಗೇ ಯಾಕೆ ಎಲ್ಲಾ ಸಮಸ್ಯೆಗಳು ಬರುತ್ತವೆ? ನನ್ನ ಜೀವನದಲ್ಲಿಯೇ ಯಾಕೆ ಮತ್ತೆ ಮತ್ತೆ ದುಃಖ ಬರುತ್ತಿದೆ? ಯಾಕೆ ನಮ್ಮ ಮನೆಯಲ್ಲಿ ನಾನು ಹೇಳಿದ ಹಾಗೆ ಯಾರೂ ಕೇಳುವುದಿಲ್ಲ? ಎಲ್ಲರೂ ನಾನು ಹೇಳಿದ ಹಾಗೆ ಕೇಳಲು ನಾನು ಏನು ಮಾಡಬೇಕು?’
ಹೀಗೆ ಏನೇನೋ ಚಿತ್ರವಿಚಿತ್ರವಾದ ಚಿಂತನೆ ಮಾಡುತ್ತಿರುತ್ತೇವೆ. ‘ಯಾಕೆ ನನ್ನ ಹೆಂಡತಿ ನನಗೆ ಇಷ್ಟೊಂದು ತೊಂದರೆಯನ್ನು ಕೊಡುತ್ತಿದ್ದಾಳೆ?, ದುಃಖವನ್ನು ಕೊಡುತ್ತಿದ್ದಾಳೆ?’ ಎಂದು ನೀವು ಯಾರನ್ನಾದರೂ ಕೇಳಲು ಹೋದರೆ ಅವರು ಹೇಳುತ್ತಾರೆ: ಹಿಂದಿನ ಜನ್ಮದಲ್ಲಿ ನೀನೇನೋ ತೊಂದರೆ ಕೊಟ್ಟಿರಬೇಕು, ನಿನ್ನಿಂದೇನೋ ಅಪರಾಧವಾಗಿರಬೇಕು ಎಂದು.
ಈ ರೀತಿಯಲ್ಲಿ ಚಿಂತನೆ ಮಾಡಲು ಹೊರಟರೆ ಇದಕ್ಕೆ ಕೊನೆಯೇ ಇರುವುದಿಲ್ಲ. ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಬೇಕಾಗಿದೆ. ಯಾವಾಗ ನಮ್ಮ ದೃಷ್ಟಿಕೋನವನ್ನು ನಾವು ಬದಲಾಯಿಸಿಕೊಳ್ಳುವೆವೋ ಆಗ ನಾವು ಜಗತ್ತನ್ನು ನೋಡುವ ರೀತಿ ಬದಲಾಗುತ್ತದೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಸಮಸ್ಯೆ ಇದೆ. ರಸ್ತೆಯಲ್ಲಿರುವ ದೀಪದ ಕಂಬ ಎದುರು ಮನೆಯ ನಾಯಿ ನನ್ನನ್ನು ಅದರ ಪ್ರೖೆವೇಟ್ ಬಾತ್ರೂಮ್ ಆಗಿಸಿಕೊಂಡಿದೆ ಎಂದು ಅಳುತ್ತಾ ಕುಳಿತರೆ? ಅದಕ್ಕೂ ಅದರದೇ ಆದಂತಹ ಸಮಸ್ಯೆ ಇದೆ. ಒಂದು ವೇಳೆ ನಮ್ಮ ಜೀವನದಲ್ಲಿ ಸಮಸ್ಯೆಗಳು ಇರಬಾರದು ಎಂದರೆ ಅದಕ್ಕಿರುವ ದಾರಿ ಒಂದೇ, ನಾವು ಸತ್ತು ಹೋಗಬೇಕು!. ಸತ್ತ ವ್ಯಕ್ತಿಗೆ ಮಾತ್ರ ಸಮಸ್ಯೆಗಳಿಲ್ಲ. ಈ ಸಮಸ್ಯೆಗಳು ನಮ್ಮ ಜೀವನದಲ್ಲಿ ಒಂದು ಭಾಗ, ಇವೆಲ್ಲವೂ ನಾವು ಜೀವನದಲ್ಲಿ ಮೇಲೇರಲು ಇರುವಂತಹ ಮೆಟ್ಟಿಲುಗಳು.