ಮುಂಗಾರಿನ ಆಗಮನವಾಗುತ್ತಿತ್ತು. ಜನರಿನ್ನೂ ಪೂರ್ಣ ಪ್ರಮಾಣದಲ್ಲಿ ಮುಂಗಾರಿನ ದೈನಂದಿನ ಜೀವನಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡಿರಲಿಲ್ಲ. ಇದ್ದಕ್ಕಿದ್ದಂತೆ ಅಂದು ಬಿಟ್ಟೂ ಬಿಡದೆ ಮಳೆ ಸುರಿಯಲಾರಂಭಿಸಿತು. ಮಹಿಳೆಯೊಬ್ಬರು ಸುರಿಯುವ ಮಳೆಯಲ್ಲಿ ರೈನ್ ಕೋಟ್ ಹಾಕಿಕೊಂಡು ಪೆಟ್ರೋಲ್ ತುಂಬಿಸಿಕೊಳ್ಳಲೆಂದು ತಮ್ಮ ದ್ವಿಚಕ್ರ ವಾಹನವನ್ನು ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದರು. ಪೆಟ್ರೋಲ್ ಹಾಕುವ ವ್ಯಕ್ತಿ ಮಳೆಯನ್ನು ಬೈಯುತ್ತಾ, ತಾನು ಕೆಲಸ ಮುಗಿಸಿ ನಾಲ್ಕು ಕಿಲೋಮೀಟರ್ನಷ್ಟು ಪ್ರಯಾಣಿಸಬೇಕಿದೆ, ರೈನ್ ಕೋಟ್ ಹಾಕಿದರೂ ಈ ಮಳೆಗೆ ಮೈಯೆಲ್ಲ ತೊಯ್ದು ಹೋಗುತ್ತದೆಯೆಂದು ತನ್ನ ಸಮಸ್ಯೆಯ ಸರಮಾಲೆಯನ್ನೇ ಹೇಳುತ್ತಾ ಅಂತೂ ಇಂತೂ ಪೆಟ್ರೋಲ್ ಹಾಕಿದ.
ಮಹಿಳೆಯು ತಾಳ್ಮೆಯಿಂದ ಆತನ ಮಾತನ್ನು ಕೇಳಿಸಿಕೊಳ್ಳುತ್ತಾ, ತಾನು ಮಗನ ಅನಾರೋಗ್ಯದ ಕಾರಣದಿಂದ ವೈದ್ಯರ ಬಳಿ ಹೋಗಿರುವುದಾಗಿಯೂ, ಈಗಾಗಲೇ 20 ಕಿಲೋಮೀಟರ್ನಷ್ಟು ದ್ವಿಚಕ್ರ ವಾಹನವನ್ನು ಚಾಲನೆ ಮಾಡಿದ್ದು, ಇನ್ನೂ 20 ಕಿಲೋ ಮೀಟರ್ ದೂರವನ್ನು ಕ್ರಮಿಸಬೇಕಿದೆ ಎಂದು ಹೇಳಿ ಹೊರಟೇಬಿಟ್ಟರು. ಪೆಟ್ರೋಲ್ ಹಾಕುವ ವ್ಯಕ್ತಿಗೆ ಮಾತು ಬಾರದಂತಾಯಿತು. ತಾನೇನೊ ತನ್ನದು ಬಹಳ ದೊಡ್ಡ ಸಮಸ್ಯೆ ಎಂದುಕೊಂಡು ಅನಾವಶ್ಯಕ ಗೊಂದಲ ಮಾಡಿಕೊಳ್ಳುತ್ತಿದ್ದರೆ ಈ ಮಹಿಳೆ ಎಷ್ಟು ಸಾವಧಾನವಾಗಿ ಸಾಗುತ್ತಿದ್ದಾರೆಂದು ಮನದಲ್ಲೇ ಚಿಂತನೆ ಮಾಡತೊಡಗಿದ.
ನಿತ್ಯ ಜೀವನದಲ್ಲಿ ಅನೇಕ ಸಣ್ಣಪುಟ್ಟ ಸಮಸ್ಯೆಗಳನ್ನೇ ನಾವು ಬೆಟ್ಟದಷ್ಟು ಭಾರ ಎಂದುಕೊಳ್ಳುತ್ತೇವೆ. ನಮ್ಮ ಕಷ್ಟಗಳನ್ನು ಹಳಿಯುತ್ತಾ, ಕೋಪ ತಾಪಗಳಂತಹ ಮಾನಸಿಕ ತೊಳಲಾಟಗಳನ್ನು ತಂದುಕೊಳ್ಳುತ್ತಾ ಜೀವನವೇ ದುಸ್ತರವೆಂಬಂತಹ ಯೋಚನೆಗೆ ಬಂದುಬಿಡುತ್ತೇವೆ. ನಮಗಿಂತ ಕಠಿಣ ಪರಿಸ್ಥಿತಿಯಲ್ಲಿ ಇರುವವರನ್ನು ನಾವು ಗಮನಿಸುವುದೇ ಇಲ್ಲ. ಸಮಾಧಾನದಿಂದ ಯೋಚಿಸಿದರೆ, ಸಮಸ್ಯೆಯ ಪರಿಹಾರದ ಕುರಿತು ಸಕಾರಾತ್ಮಕವಾಗಿ ಕಾರ್ಯೋನ್ಮುಖರಾದರೆ ಅದಕ್ಕೊಂದು ಪರಿಹಾರ ಸಿಕ್ಕೇ ಸಿಗುತ್ತದೆ. ನಮಗಿಂತ ಕಷ್ಟದ ಪರಿಸ್ಥಿತಿ ಎದುರಿಸಿ, ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಂತೋಷದಿಂದ ಯಶಸ್ವಿ ಜೀವನವನ್ನು ನಡೆಸುತ್ತಿರುವವನ್ನು ಪ್ರೇರಣೆಯಾಗಿ ಸ್ವೀಕರಿಸಬೇಕು.ಅಂತಹ ವ್ಯಕ್ತಿಗಳನ್ನು ಎಲ್ಲೋ ಹುಡುಕಿಕೊಂಡು ಹೋಗಬೇಕೆಂದೇನಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಮ್ಮ ಎದುರಿನಲ್ಲೇ ಖಂಡಿತವಾಗಿ ಇರುತ್ತಾರೆ.
ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ | ತೃಣ ಮೊಳೆಯುವುದು ಮರಳಿ ಹನಿಯೆರಡು ಬೀಳೆ || ಅಣಗಿರ್ದು ನರನಾಶೆಯಂತು ಕಷ್ಟದ ದಿನದಿ | ಕುಣಿವುದನುಕೂಲ ಬರೆ ಮಂಕುತಿಮ್ಮ ||
ಎಂಬ ಡಿ.ವಿ.ಜಿ ಯವರ ಕಗ್ಗದ ಸಾಲುಗಳಂತೆ , ಬೇಸಿಗೆಯ ಬಿರು ಬಿಸಿಲಿಗೆ ಒಣಗಿ ಕಾಣದಂತಿರುವ ಸಣ್ಣ ಹುಲ್ಲು ಕೂಡ ಮಳೆ ಹನಿ ಬಿದ್ದೊಡನೆ ಹೊಸ ಜೀವ ಕಳೆ ಪಡೆವಂತೆ, ಸಮಾಧಾನ ಮತ್ತು ಸಕಾರಾತ್ಮಕ ಚಿಂತನೆಯ ಮೂಲಕ ಮುನ್ನಡೆದಾಗ ಸುಖವೆಂಬ ಸೊಗದ ಹಾದಿ ತಾನಾಗಿಯೇ ತೆರೆದುಕೊಳ್ಳುತ್ತದೆ.
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)