ನ್ಯೂಸ್

ಕೈಕೊಟ್ಟ ಆ್ಯಪ್​, ಆಪತ್ತಿಗಾಗದ ಶಿಕ್ಷಕ ಮಿತ್ರ; ಟೀಚರ್​ಗಳ ವರ್ಗಾವಣೆ ಕೌನ್ಸೆಲಿಂಗ್​ಗೆ ರೂಪಿಸಿದ್ದ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ

Webdesk - Ravikanth

| ದೇವರಾಜ್ ಕನಕಪುರ ಬೆಂಗಳೂರು

ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್​ಗೆ ರೂಪಿಸಿದ್ದ ‘ಶಿಕ್ಷಕ ಮಿತ್ರ’ ಮೊಬೈಲ್ ಆಪ್ ಕೈಕೊಟ್ಟಿರುವ ಪರಿಣಾಮ ತಾವಿದ್ದಲ್ಲೇ ಕೌನ್ಸೆಲಿಂಗ್​ನಲ್ಲಿ ಭಾಗವಹಿಸುವ ಅವಕಾಶ ಶಿಕ್ಷಕರಿಗೆ ಕೈತಪಿದೆ. ಸೆ.15ರಂದು ಕೌನ್ಸೆಲಿಂಗ್ ಆರಂಭವಾಗಲಿದ್ದು, ಕಂಪ್ಯೂಟರ್ ಮೂಲಕವೇ ಕೌನ್ಸೆಲಿಂಗ್ ನಡೆಯಲಿದೆ!

ಈ ಹಿಂದೆ ಶಿಕ್ಷಕರ ವರ್ಗಾವಣೆಗೆ ಅನುಕೂಲವಾಗುವಂತೆ ಶಿಕ್ಷಕ ಮಿತ್ರ ಆಪ್ ರೂಪಿಸಲಾಗಿತ್ತು. ಇದರಿಂದ ಶಿಕ್ಷಕರು ಎಲ್ಲೇ ಇದ್ದರೂ ಬೆರಳ ತುದಿಯಲ್ಲೇ ಕೌನ್ಸೆಲಿಂಗ್​ನಲ್ಲಿ ಭಾಗವಹಿಸಬಹುದಾಗಿತ್ತು. ಆದರೆ, ತಾಂತ್ರಿಕ ಕಾರಣ, ಗ್ರಾಮೀಣ ಭಾಗದ ಶಿಕ್ಷಕರಿಗೆ ತಾಂತ್ರಿಕ ಜ್ಞಾನ ಕೊರತೆಯಿಂದಾಗಿ ಆಪ್ ಬದಲು ಕಂಪ್ಯೂಟರ್ ಮೂಲಕವೇ ಪ್ರತಿ ವರ್ಷದಂತೆ ಕೌನ್ಸೆಲಿಂಗ್ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ವರ್ಗಾವಣೆ ಕೋರಿ 71 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು ಶಿಕ್ಷಣ ಇಲಾಖೆಯು ಸೆ.8ರವರೆಗೆ ವಿಸ್ತರಿಸಿದೆ. ಹಾಲಿ 3 ಸಾವಿರ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆಗೆ ಗುರಿಯಾಗಿದ್ದ ಶಿಕ್ಷಕರಿಗೆ ವರ್ಗಾವಣೆ ಕೌನ್ಸೆಲಿಂಗ್ ಆರಂಭವಾಗಲಿದೆ. ಶಿಕ್ಷಕರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬಂದು ದಿನಗಟ್ಟಲೇ ಕಾಯುವ ಪರಿಸ್ಥಿತಿ ನಿವಾರಣೆ ಹಾಗೂ ಪಾರದರ್ಶಕತೆ ಕಾಯ್ದು ಕೊಳ್ಳುವ ಉದ್ದೇಶದಿಂದ ಈ ಹಿಂದೆ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್ ಶಿಕ್ಷಕ ಸ್ನೇಹಿ ಶಿಕ್ಷಕ ಮಿತ್ರ ಆಪ್ ರೂಪಿಸಲು ಸೂಚಿಸಿದ್ದರು. ಶಿಕ್ಷಕರ ಎಲ್ಲ ಮಾಹಿತಿಯನ್ನು ಅಪ್​ಲೋಡ್ ಮಾಡಲು ತಿಳಿಸಲಾಗಿತ್ತು. ಆದರೆ ತಂತ್ರಜ್ಞಾನದ ಮಾಹಿತಿ ಕೊರತೆಯಿಂದಾಗಿ ಆಪ್ ಬಳಕೆ ಶಿಕ್ಷಕರಿಗೆ ಕಷ್ಟವಾಗಿದೆ. ಗ್ರಾಮೀಣ ಭಾಗದಲ್ಲಿ ನೆಟ್​ವರ್ಕ್ ಸಮಸ್ಯೆ ಇರುವುದು, ಖಾಲಿ ಸ್ಥಳ ತೋರಿಸಲು ಸಾಧ್ಯವಾಗದೇ ಇರುವುದು ಸೇರಿ ಹಲವು ಕಾರಣಗಳಿಂದ ವಿಭಾಗೀಯ ಮತ್ತು ಜಿಲ್ಲಾ ಹಂತದಲ್ಲಿ ಕಂಪ್ಯೂಟರ್ ಮೂಲಕವೇ ಕೌನ್ಸೆಲಿಂಗ್ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

3 ಸಾವಿರ ಶಿಕ್ಷಕರು: ಕಳೆದ ವರ್ಷದ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ಪಡೆದ 3 ಸಾವಿರ ಶಿಕ್ಷಕರಿಗೆ ಈ ಬಾರಿ ಕೌನ್ಸೆಲಿಂಗ್ ನಡೆಸಿ ಮೊದಲು ಸ್ಥಳ ಆಯ್ಕೆಗೆ ಅವಕಾಶ ನೀಡಲಿದೆ. ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ತನ್ವೀರ್ ಸೇಠ್ ನಗರದಲ್ಲಿ 10 ವರ್ಷ ಮೇಲ್ಪಟ್ಟು ಕರ್ತವ್ಯನಿರ್ವಹಿಸುತ್ತಿದ್ದ ಶಿಕ್ಷಕರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ, ಗ್ರಾಮೀಣಭಾಗದ ಶಿಕ್ಷಕರಿಗೆ ನಗರಕ್ಕೆ ಬರಲು ಅವಕಾಶ ಕಲ್ಪಿಸಿದ್ದರು. ಆದರೆ, ಇದಕ್ಕೆ ಶಿಕ್ಷಕರಿಂದ ವಿರೋಧ ವ್ಯಕ್ತವಾಗಿ, ವಿಧಾನ ಪರಿಷತ್ತಿನ ಸದಸ್ಯರ ಮೂಲಕ ಒತ್ತಡ ಹಾಕಿಸಿ ಹೊಸ ವರ್ಗಾವಣೆ ಕಾಯ್ದೆ ರೂಪಿಸಿ ಹೆಚ್ಚುವರಿ ಮತ್ತು ಕಡ್ಡಾಯ ಎಂಬ ಪರಿಕಲ್ಪನೆಯನ್ನೇ ತೆಗೆದು ಹಾಕಿಸಿದರು.

ಉಳಿದ ಶಿಕ್ಷಕರ ಕತೆ?: ಸದ್ಯ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್ ಮಾಡಿ ಮುಗಿಸಿದ ಬಳಿಕ ಸಾಮಾನ್ಯ ಶಿಕ್ಷಕರ ವರ್ಗಾವಣೆ ಕೈಗೆತ್ತುಕೊಳ್ಳಲಿದೆ. ವೇಳಾಪಟ್ಟಿಯ ಪ್ರಕಾರ ನವೆಂಬರ್​ನಲ್ಲಿ ಕೌನ್ಸೆಲಿಂಗ್ ಆರಂಭವಾಗಲಿದೆ. ಒಟ್ಟಾರೆ ಕೌನ್ಸೆಲಿಂಗ್ ಪ್ರಕ್ರಿಯೆಯು 2022 ಫೆಬ್ರವರಿ 2ನೇ ವಾರ ಅಂತ್ಯವಾಗಲಿದೆ. 71 ಸಾವಿರ ಶಿಕ್ಷಕರ ಪೈಕಿ 20 ಸಾವಿರ ಶಿಕ್ಷರಿಗೆ ವರ್ಗಾವಣೆಯ ಫಲ ದೊರೆಯುವ ಸಾಧ್ಯತೆ ಇದೆ.

ಶಾಲೆ ಆರಂಭ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ: 6ರಿಂದ 8ನೇ ತರಗತಿ ಭೌತಿಕ ಕ್ಲಾಸ್ ಅನ್ನು ಸೆ.6ರಂದು ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶಿಕ್ಷಣ ಇಲಾಖೆಯ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಆಯುಕ್ತರು ಗುರುವಾರ ವರ್ಚುವಲ್ ಮೂಲಕ ರಾಜ್ಯದ ಎಲ್ಲ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಜತೆಗೆ ಸಭೆ ನಡೆಸಿದರು. ಶಾಲೆ ಆರಂಭಕ್ಕೆ ಅವಶ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜಿಲ್ಲಾಡಳಿತ ಸಹಯೋಗ ಪಡೆದು ತರಗತಿಗಳನ್ನು ಸ್ಯಾನಿಟೈಸ್ ಮಾಡಿಸಬೇಕು. ಆರಂಭದ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಸೂಚನೆ ನೀಡಿದ್ದಾರೆ.

ಪೂರ್ಣ ಶಾಲೆ ಆರಂಭ ಶೀಘ್ರ?:

ಹಾವೇರಿ: ಒಂದನೇ ತರಗತಿಯಿಂದ ಪೂರ್ಣ ಪ್ರಮಾಣದ ಶಾಲೆ ಆರಂಭ ಕುರಿತು ಶೀಘ್ರವೇ ನಿರ್ಧರಿಸಲಾಗುವುದು ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವ ಬಿ.ಸಿ. ನಾಗೇಶ ತಿಳಿಸಿದರು. ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್​ಲೈನ್ ತರಗತಿಗಳಿಂದ ಏಕಾಗ್ರತೆ ಕಡಿಮೆಯಾಗುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ಆರಂಭಿಸಿ ಎಂಬ ಬೇಡಿಕೆ ಇದೆ. ಸದ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ಆಧರಿಸಿ ಆನ್​ಲೈನ್ ತರಗತಿ ವಂಚಿತ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಎಸ್​ಒಪಿ ಅನುಸರಿಸಿ ಆ. 23ರಿಂದ 9 ಮತ್ತು 10ನೇ ತರಗತಿ ಆರಂಭಿಸಲಾಗಿದೆ. ಸೆ. 6ರಿಂದ 6ರಿಂದ 8ನೇ ತರಗತಿಗಳನ್ನು ಆರಂಭಿಸಲಾಗುವುದು. ಕೋವಿಡ್ 3ನೇ ಅಲೆಯ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರ ಅಥವಾ 10 ದಿನಗಳಲ್ಲಿ ಪೂರ್ಣ ಪ್ರಮಾಣದ ಶಾಲೆಗಳ ಆರಂಭ ಕುರಿತಂತೆ ತಜ್ಞರೊಂದಿಗೆ ರ್ಚಚಿಸಿ ನಿರ್ಧರಿಸಲಾಗುವುದು. ಸೇತುಬಂಧ ಶೈಕ್ಷಣಿಕ ಕಾರ್ಯಕ್ರಮವನ್ನೂ ಆರಂಭಿಸಲಾಗುವುದು ಎಂದರು.

ಶುಲ್ಕ ಸಮಸ್ಯೆಗೆ ಶೀಘ್ರ ಪರಿಹಾರ...: ಖಾಸಗಿ ಶಾಲೆಗಳ ಶುಲ್ಕ ಸಮಸ್ಯೆಯನ್ನು ಶೀಘ್ರವೇ ಸಭೆ ಕರೆದು ತೀರ್ವನಿಸಲಾಗುವುದು. ಖಾಸಗಿ ಶಾಲೆಗಳ ಶುಲ್ಕ ಪಾವತಿ ವಿಷಯವಾಗಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ಹೊರಗೆ ಪಾಲಕರು, ಶಾಲಾ ವ್ಯವಸ್ಥಾಪನಾ ಸಮಿತಿಯೊಂದಿಗೆ ರ್ಚಚಿಸಲಾಗುವುದು. ಖಾಸಗಿ ಶಾಲಾ ಶುಲ್ಕ ನಿಗದಿ ಕುರಿತು ಮುಖ್ಯಮಂತ್ರಿಗಳೊಂದಿಗೆ ರ್ಚಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಸಿ. ನಾಗೇಶ ತಿಳಿಸಿದರು.

5ರಂದು ರೈತ ವಿದ್ಯಾನಿಧಿಗೆ ಚಾಲನೆ

ಬೆಂಗಳೂರು: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಘೋಷಣೆ ಮಾಡಿದ ರೈತ ವಿದ್ಯಾನಿಧಿ ಯೋಜನೆ ಶಿಕ್ಷಕರ ದಿನವಾದ ಸೆ.5 ರಂದು ಚಾಲನೆ ಪಡೆದುಕೊಳ್ಳಲಿದೆ. ರಾಜ್ಯದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪೋ›ತ್ಸಾಹ ನೀಡುವ ಹಾಗೂ ಉನ್ನತ ಶಿಕ್ಷಣಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿದ ರೈತರ ಮಕ್ಕಳಿಗೆ ವಾರ್ಷಿಕ ಶಿಷ್ಯವೇತನ ಲಭ್ಯವಾಗಲಿದೆ. ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಆಯ್ದ ರೈತರ ಮಕ್ಕಳನ್ನು ಸನ್ಮಾನಿಸಲಾಗುತ್ತದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಇತರರು ಭಾಗವಹಿಸಲಿದ್ದಾರೆ. ಪಿಯುಸಿ, ಐಟಿಐ, ಡಿಪ್ಲೊಮೊ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 2500 ರೂ. ಹಾಗೂ ವಿದ್ಯಾರ್ಥಿನಿಯರಿಗೆ 3000 ರೂ., ಬಿಎ, ಬಿಎಸ್​ಸಿ, ಬಿಕಾಂ ಓದುವ ವಿದ್ಯಾರ್ಥಿಗಳಿಗೆ 5000 ರೂ., ವಿದ್ಯಾರ್ಥಿನಿಯರಿಗೆ 5,500 ರೂ., ಎಲ್​ಎಲ್​ಬಿ, ಪ್ಯಾರ ಮೆಡಿಕಲ್, ಬಿ. ಫಾರ್ಮ, ನರ್ಸಿಂಗ್ ಓದುವ ವಿದ್ಯಾರ್ಥಿಗಳಿಗೆ 7,500 ರೂ. ಹಾಗೂ ವಿದ್ಯಾರ್ಥಿನಿಯರಿಗೆ 8,000 ರೂ., ಮತ್ತು ಎಂಬಿಬಿಎಸ್, ಬಿಇ, ಬಿಟೆಕ್ ಓದುವ ವಿದ್ಯಾರ್ಥಿಗಳಿಗೆ 10,000 ರೂ., ಹಾಗೂ ವಿದ್ಯಾರ್ಥಿನಿಯರಿಗೆ 10,500 ರೂ. ಶಿಷ್ಯ ವೇತನ ನೀಡಲಾಗುತ್ತದೆ.

ಶಾಲಾ ಪ್ರವೇಶಕ್ಕೆ ದಿನಾಂಕ ವಿಸ್ತರಣೆ: ರಾಜ್ಯದ ಎಲ್ಲ ಶಾಲೆಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿಗೆ ಮಕ್ಕಳ ದಾಖಲಾತಿ ಮಾಡಿಕೊಳ್ಳಲು ನಿಗದಿ ಪಡಿಸಿದ್ದ ದಿನಾಂಕವನ್ನು ಅಕ್ಟೋಬರ್ 30ರವರೆಗೆ ವಿಸ್ತರಿಸಿದೆ. ಈ ಮೊದಲು ಆ.30 ಕೊನೆಯ ದಿನವಾಗಿತ್ತು. ಭೌತಿಕ ತರಗತಿಗಳು ಆರಂಭವಾಗು ವುದು ತಡವಾಗಿರುವ ಹಿನ್ನೆಲೆಯಲ್ಲಿ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.