ನ್ಯೂಸ್

ಮದ್ವೆಯಾಗಿ ವರ್ಷ ಕಳೆಯುವಷ್ಟರಲ್ಲಿ ಪತಿಯ ಹತ್ಯೆ: ಮಾಜಿ ಬಾಕ್ಸರ್ ಬಂಧನಕ್ಕೆ ಕಾರಣವಾಯ್ತು ಆ ಒಂದು ವಸ್ತು!​

ಬರ್ನ್​: ಭಾರಿ ಗಾತ್ರದ ಆಯುಧದಿಂದ ಗಂಡನನ್ನು ಹೊಡೆದು ರಕ್ತಸಿಕ್ತವಾಗಿ ಕೊಲೆ ಮಾಡಿದ ಆರೋಪದಲ್ಲಿ ಬ್ರೆಜಿಲ್​ ಮೂಲದ ಮಾಜಿ ವೃತ್ತಿಪರ ಬಾಕ್ಸರ್​ ವಿವಿಯನೆ ಒಬೆನಾಫ್​ (34)ರನ್ನು ಬಂಧಿಸಲಾಗಿದೆ.

ಸ್ವಿಟ್ಜರ್ಲ್ಯಾಂಡ್​ನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ವಿವಿಯನೆ ಪತಿ ಥಾಮಸ್​ ಮೃತದೇಹ ಪತ್ತೆಯಾಗಿತ್ತು. ರೆಸ್ಟೋರೆಂಟ್​ ಮಾಲೀಕರಾಗಿದ್ದ ಥಾಮಸ್​ ಮೃತದೇಹವು ಬಲವಾದ ಆಯುಧದಿಂದ ಹೊಡೆದು ರಕ್ತಸಿಕ್ತವಾಗಿ ಗಾಯಗೊಳಿಸಿ ಬರ್ಬರವಾಗಿ ಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಪಾರ್ಟ್​ಮೆಂಟ್​ನಲ್ಲಿ ಆಯುಧ ಪತ್ತೆಯಾಗಿದ್ದರಿಂದ ಸಹಜವಾಗಿಯೇ ವಿವಿಯನೆ ಮೇಲೆ ಅನುಮಾನ ವ್ಯಕ್ತವಾಗಿದೆ.

ಕಳೆದ ವಾರವೇ ವಿವಿಯನೆಯನ್ನು ಸ್ವಿಟ್ಜರ್ಲ್ಯಾಂಡ್​ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಯ ಕೊಲೆಯಲ್ಲಿ ಪ್ರಾಥಮಿಕ ಶಂಕಿತೆಯಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ.

ಇನ್ನು ವಿವಿಯನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು, ಮಾಜಿ ಬಾಕ್ಸಿಂಗ್​ ಚಾಂಪಿಯನ್​ ಮತ್ತು ಒಲಿಂಪಿಕ್​ ಜಿಮ್ನಾಸ್ಟ್​ ಸಹ ಹೌದು. ತನ್ನ ವೃತ್ತಿ ಜೀವನದಲ್ಲಿ ಹಲವು ದಾಖಲೆ ಬರೆದಿರುವ ವಿವಿಯನೆ ಎರಡು ವರ್ಲ್ಡ್​ ಬಾಕ್ಸಿಂಗ್​ ಫೆಡರೇಶನ್​ ಇಂಟರ್​ನ್ಯಾಷನಲ್​ ಟೈಟಲ್​ ಕೂಡ ಪಡೆದುಕೊಂಡಿದ್ದಾರೆ. ಕಳೆದ ವರ್ಷವಷ್ಟೇ ನಿವೃತ್ತಿ ಪಡೆದುಕೊಂಡಿದ್ದರು.

ಕಳೆದ ಜನವರಿ 25ರಂದು ಥಾಮಸ್​ರನ್ನು ವಿವಿಯನೆ ಮದುವೆಯಾಗಿದ್ದರು. ತಾವು ನೆಲೆಸಿದ್ದ ಸ್ವಿಸ್​ನ ಇಂಟರ್​ಲೇಕನ್​ ಪಟ್ಟಣದಲ್ಲಿ ಜಿಮ್​ ತೆರೆದಿದ್ದರು. ಅಲ್ಲಿಯೇ ಥಾಮಸ್​ ರೆಸ್ಟೋರೆಂಟ್​ ಮಾಲೀಕರಾಗಿದ್ದರು. ಪೊಲೀಸರು ಜಿಮ್​ ಹುಡುಕಾಡಿದಾಗ ಕೆಲ ದಾಖಲೆಗಳು ಸಹ ಪತ್ತೆಯಾಗಿವೆ.

ಇನ್ನು ವಿವಿಯನೆ ಈ ಮುಂಚೆ ಒಂದು ಬಾರಿ ಬಂಧನಕ್ಕೆ ಒಳಗಾಗಿದ್ದರು. 2016ರಲ್ಲಿ ಲಂಡನ್​ನಲ್ಲಿ ತನ್ನ 30ನೇ ಹುಟ್ಟಹಬ್ಬದ ಸಂಭ್ರಮ ವೇಳೆ ವ್ಯಕ್ತಿಯೊಬ್ಬ ತನ್ನ ಮೈಕೈ ಮುಟ್ಟಿದ ಎಂದು ಆತನ ಮೇಲೆ ಬಾಕ್ಸಿಂಗ್​ ಪಂಚ್​ ಮೂಲಕ ಹಲ್ಲೆ ಮಾಡಿದ್ದರು. ಘಟನೆ ನಡೆದ ರಾತ್ರಿ ಕೆಲವು ಗಂಟೆಯವರೆಗೂ ವಿವಿಯನೆ ಜೈಲು ವಾಸ ಅನುಭವಿಸಿದ್ದಳು.

ವಿವಿಯನೆ ಜತೆ ಈ ಹಿಂದೆ ಡೇಟಿಂಗ್​ ಮಾಡಿದ್ದ ಫೈಟರ್​ ಮಾಧ್ಯಮ ಜತೆ ಮಾತನಾಡಿ, ಸದ್ಯ ಆಕೆ ಜೈಲು ವಾಸಿಯಾಗಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಅವಳಿಗೆ ಯಾವಾಗಲೂ ಎರಡು ಮುಖವಿದೆ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​)