ನವದೆಹಲಿ: ಕೇರಳದ ವಯನಾಡು ( Wayanad ) ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ( Priyanka Gandhi ) ಅವರು ಬುಧವಾರ (ಅ.23) ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಪ್ರಿಯಾಂಕಾ ಅವರು ಬೃಹತ್ ರ್ಯಾಲಿ ನಡೆಸಿದರು. ಈ ವೇಳೆ ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಥ್ ನೀಡಿದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ನಾಮಪತ್ರದೊಂದಿಗೆ ಪ್ರಿಯಾಂಕಾ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಆಕೆಯ ಆಸ್ತಿ ವಿವರ ಇದೀಗ ಬಹಿರಂಗವಾಗಿದೆ. ಪ್ರಿಯಾಂಕಾ ಅವರು 12 ಕೋಟಿ ರೂ. ಆಸ್ತಿ ಹೊಂದಿದ್ದರೆ, ಅವರ ಪತಿ ರಾಬರ್ಟ್ ವಾದ್ರಾ 65 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
2023-2024ರ ಹಣಕಾಸು ವರ್ಷದಲ್ಲಿ ಬಾಡಿಗೆ ಆದಾಯ, ಇತರ ಹೂಡಿಕೆಗಳೊಂದಿಗೆ ಒಟ್ಟು 46.39 ಲಕ್ಷ ರೂ. ಆದಾಯ ಬಂದಿರುವುದಾಗಿ ಘೋಷಿಸಿದ್ದಾರೆ. ಒಟ್ಟು 12 ಕೋಟಿ ರೂ. ಆಸ್ತಿಯಲ್ಲಿ ಮೂರು ಬ್ಯಾಂಕ್ ಖಾತೆಗಳಲ್ಲಿರುವ ಠೇವಣಿ, ಗಂಡ ಉಡುಗೊರೆಯಾಗಿ ನೀಡಿದ ಹೋಂಡಾ ಸಿಆರ್ವಿ ಕಾರು ಮತ್ತು 1.15 ಕೋಟಿ ರೂ. ಮೌಲ್ಯದ 4,400 ಗ್ರಾಂ ಚಿನ್ನಾಭರಣ ಸೇರಿ 4.25 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
ಇನ್ನು ಸ್ಥಿರಾಸ್ತಿ ವಿಚಾರಕ್ಕೆ ಬರುವುದಾದರೆ, 52 ವರ್ಷದ ಪ್ರಿಯಾಂಕಾ ಅವರು 7.41 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದರಲ್ಲಿ ನವದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿರುವ ಎರಡು ಪಿತ್ರಾರ್ಜಿತ ಕೃಷಿ ಭೂಮಿ ಮತ್ತು ಅದರಲ್ಲಿರುವ ಫಾರ್ಮ್‌ಹೌಸ್ ಕಟ್ಟಡದಲ್ಲಿ ಅರ್ಧ ಪಾಲು ಪ್ರಿಯಾಂಕಾ ಅವರಿಗೆ ಸೇರಿದ್ದಾಗಿದೆ. ಇವುಗಳ ಮೌಲ್ಯ ಬರೋಬ್ಬರಿ 2.10 ಕೋಟಿ ರೂಪಾಯಿ. ಇದಲ್ಲದೆ, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಸ್ವಂತ ವಸತಿ ಆಸ್ತಿಯನ್ನು ಹೊಂದಿದ್ದಾರೆ, ಇದು ಪ್ರಸ್ತುತ 5.63 ಕೋಟಿ ರೂ. ಮೌಲ್ಯವನ್ನು ಹೊಂದಿದೆ. ಅಲ್ಲದೆ, ತನ್ನ ವಿರುದ್ಧ ಅರಣ್ಯ ಇಲಾಖೆಯಿಂದ ಎರಡು ಎಫ್‌ಐಆರ್ ಹಾಗೂ ಒಂದು ನೋಟಿಸ್ ಜಾರಿ ಮಾಡಲಾಗಿದೆ ಎಂದು ಪ್ರಿಯಾಂಕಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಅವರ ಪತಿ ರಾಬರ್ಟ್ ವಾದ್ರಾ ಅವರು 39 ಕೋಟಿ ಚರಾಸ್ತಿ ಹಾಗೂ 27.64 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು 15.75 ಲಕ್ಷ ರೂ. ಸಾಲ ಹೊಂದಿದ್ದರೆ, ಅವರ ಪತಿ ವಾದ್ರಾ 10 ಕೋಟಿ ರೂ. ಸಾಲ ಮಾಡಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ತನ್ನ ಆದಾಯದ ಮೂಲವು ಬಾಡಿಗೆ, ಬ್ಯಾಂಕ್‌ಗಳಿಂದ ಬಡ್ಡಿ, ಹೂಡಿಕೆಗಳು ಮತ್ತು ಇತರ ಮಾರ್ಗಗಳನ್ನು ಒಳಗೊಂಡಿದೆ ಎಂದು ಪ್ರಿಯಾಂಕಾ ಹೇಳಿದ್ದರೆ, ತಮ್ಮ ಪತಿ ರಾಬರ್ಟ್ ವಾದ್ರಾ ಅವರ ಆದಾಯದ ಮೂಲಗಳು ವ್ಯಾಪಾರ, ಬಾಡಿಗೆ, ಬ್ಯಾಂಕ್‌ಗಳಿಂದ ಬಡ್ಡಿ, ಹೂಡಿಕೆಗಳು ಮತ್ತು ಇತರವುಗಳನ್ನು ಒಳಗೊಂಡಿವೆ ಎಂದು ತಿಳಿಸಿದ್ದಾರೆ.
ಇನ್ನು ಪ್ರಿಯಾಂಕಾ ಗಾಂಧಿ ಅವರು ತಮ್ಮ ಶಿಕ್ಷಣದ ವಿವರಗಳನ್ನೂ ಅಫಿಡವಿಟ್‌ನಲ್ಲಿ ಪ್ರಕಟಿಸಿದ್ದಾರೆ. ಯುನೈಟೆಡ್ ಕಿಂಗ್ಡಮ್ನ ಸುಂದರ್‌ಲ್ಯಾಂಡ್ ವಿಶ್ವವಿದ್ಯಾಲಯದಿಂದ ದೂರಶಿಕ್ಷಣದ ಮೂಲಕ ಬೌದ್ಧ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ದೆಹಲಿ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಬಿಎ ಗೌರವ ಪದವಿ ಪಡೆದಿದ್ದಾರೆ.
ಅಂದಹಾಗೆ ಪ್ರಿಯಾಂಕಾ ಗಾಂಧಿ ಅವರು 35 ವರ್ಷಗಳ ರಾಜಕೀಯ ಅನುಭವವನ್ನು ಹೊಂದಿದ್ದಾರೆ. 1989 ರಲ್ಲಿ ತನ್ನ ದಿವಂಗತ ತಂದೆ ರಾಜೀವ್ ಗಾಂಧಿ ಅವರ ಪರವಾಗಿ ಪ್ರಚಾರ ಮಾಡುವಾಗ 17ನೇ ವಯಸ್ಸಿನಲ್ಲಿ ರಾಜಕೀಯ ಚಟುವಟಿಕೆ ಪ್ರಾರಂಭವಾಯಿತು. ಇದೀಗ ಇದೇ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಇಳಿದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್)