ಉತ್ತರಪ್ರದೇಶ: ಲಾಖಿಂಪುರ ಖೇರಿಯಲ್ಲಿನ ಘರ್ಷಣೆ ಹಾಗೂ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಲು ಯತ್ನಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಈ ವೇಳೆ ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ವೈರಲ್ ಆಗಿದ್ದು, ಈಗ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು ಅವರನ್ನು ಉತ್ತರಪ್ರದೇಶದ ಪ್ರೊವಿನ್ಸಿಯಲ್ ಆರ್ಮ್ಸ್ ಕಾನ್ಸ್ಟ್ಯಾಬುಲರಿ ಗೆಸ್ಟ್ ಹೌಸ್ನಲ್ಲಿ ನಿನ್ನೆ ರಾತ್ರಿ ಇರಿಸಿದ್ದರು. ತಮ್ಮ ನಾಯಕಿಯನ್ನು ಹೀಗೆ ಬಂಧನದಲ್ಲಿ ಇರಿಸಿದ ಬಗ್ಗೆ ಕಾಂಗ್ರೆಸ್ ವ್ಯಾಪಕವಾಗಿ ಖಂಡಿಸಿದ್ದು, ಬಹಳಷ್ಟು ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ತಮ್ಮನ್ನು ಪೊಲೀಸರು ಇರಿಸಿದ್ದ ಕೋಣೆಯನ್ನು ಪ್ರಿಯಾಂಕಾ ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ. ವಶದಲ್ಲಿ ಇರಿಸಲಾದ ಕೋಣೆ ಅಷ್ಟೊಂದು ಸ್ವಚ್ಛವಾಗಿರದ ಕಾರಣ ಪ್ರಿಯಾಂಕಾ ತಾವೇ ಅದನ್ನು ಸ್ವಚ್ಛಗೊಳಿಸಿಕೊಂಡಿದ್ದಾರೆ. ಈ ಸಂದರ್ಭದ ದೃಶ್ಯಾವಳಿಯ ವಿಡಿಯೋ ಇದೀಗ ವೈರಲ್ ಆಗಿದೆ. (ಏಜೆನ್ಸೀಸ್)