ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಶಾಸಕ, ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಗಾದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಬಿಟ್ ಕಾಯಿನ್ ಸಂಬಂಧ ಈವರೆಗಿನ ವಿವಿಧ ಬೆಳವಣಿಗೆ ಸಂಬಂಧ ದಾಖಲೆಗಳನ್ನು ಪ್ರದರ್ಶಿಸಿದರು. ಜತೆಗೆ ಸರ್ಕಾರಕ್ಕೆ ಐದು ಪ್ರಶ್ನೆ ಕೇಳಿ, ಉತ್ತರಿಸುವಂತೆ ಸವಾಲು ಹಾಕಿದರು.
ಪ್ರಕರಣವನ್ನು ಸರ್ಕಾರ ಇಡಿ ಹಾಗೂ ಸಿಬಿಐಗೆ ಕೊಟ್ಟಿರುವುದು ಅನುಮಾನ, ಹಾಗಿದ್ದಲ್ಲಿ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ ಖರ್ಗೆ, ಶ್ರೀಕಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಡ್ರಗ್ ಸೇವನೆ ಮಾಡಿಸಲಾಗಿದೆಯಾ? ಪೊಲೀಸರು ಡ್ರಗ್ ನೀಡಿ ಬಿಟ್ ಕಾಯಿನ್ ಹ್ಯಾಕ್ ಮಾಡಿಸಿದ್ದಾರೆಯೇ? ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಶ್ರೀಕಿ ಡ್ರಗ್ ಸೇವನೆ ಮಾಡಿರಲಿಲ್ಲ ಎಂಬುದಕ್ಕೆ ಎಫ್ಎಸ್ಎಲ್ ವರದಿ ಇರುವುದನ್ನು ಪ್ರಸ್ತಾಪಿಸಿದರು. ಪಂಚನಾಮೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತೋರಿಸಿದ್ದ ಬಿಟ್ ಕಾಯಿನ್ ಕಾಣೆಯಾಗಿದೆ. ಇದು ಎಲ್ಲಿ ಹೋಯಿತು? ಪೊಲೀಸ್ ವ್ಯಾಲೆಟ್ಗೆ ವರ್ಗಾವಣೆ ಮಾಡಿರುವ ಟ್ರಾ್ಯನ್ಸ್ಯಾಕ್ಷನ್ ಐಡಿ ನಕಲಿ ಎಂದು ಬಂದಿತ್ತು, ಹೀಗಾಗಿ ಆ ಬಿಟ್ ಕಾಯಿನ್ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ಐದು ಸಾವಿರ ಬಿಟ್ ಕಾಯಿನ್ ಹ್ಯಾಕ್ ಮಾಡಿದ್ದಾಗಿ ಶ್ರೀಕಿ ಹೇಳಿಕೊಂಡಿದ್ದಾನೆ. ಇದರ ಮೌಲ್ಯ 2,500 ಕೋಟಿ ರೂ. ಆಗಿದ್ದು, ಆ ಕಾಯಿನ್ಗಳು ಎಲ್ಲಿ ಹೋಗಿವೆ? ಡ್ರಗ್ ದಂಧೆ ಬಗ್ಗೆಯೂ ಹೇಳಿಕೆ ನೀಡಿದ್ದಾನೆ. ಇಲ್ಲಿ ಸರ್ಕಾರ ಹಾಗೂ ಪೊಲೀಸರ ದಕ್ಷತೆಯ ಕೊರತೆ ಎದ್ದು ಕಾಣುತ್ತಿದ್ದು, ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಇಡಿ, ಸಿಬಿಐ, ಇಂಟರ್ಪೋಲ್ಗೆ ರವಾನಿಸಲು ವಿಳಂಬ ಮಾಡಲಾಗಿದೆ ಎಂದು ಆರೋಪಿಸಿದರು.
ಬಿಟ್ ಕಾಯಿನ್ ವಿಚಾರವಾಗಿ ಪ್ರಧಾನಿ ಜತೆ ಮಾತನಾಡಿದ್ದೇನೆ. ಅವರು ಇದು ಪ್ರಮುಖ ವಿಚಾರವಲ್ಲ ಎಂದಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆಗಿದ್ದರೆ ಬೆಂಕಿ ಇಲ್ಲದೆ ಹೊಗೆ ಆಡುತ್ತದೆಯೇ? ಸಿಸಿಬಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ 31 ಬಿಟ್ ಕಾಯಿನ್ ವಶಪಡಿಸಿಕೊಂಡಿರು ವುದಾಗಿ ತಿಳಿಸಿದ್ದಾರೆ. ಅವು ಈಗ ಎಲ್ಲಿವೆ? ಯಾರು ಸೀಜ್ ಮಾಡಿದ್ದಾರೆ? ಇವೆಲ್ಲವನ್ನೂ ಸರ್ಕಾರ ಜನರ ಮುಂದೆ ಇಡಬೇಕು.
| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ