ನ್ಯೂಸ್

ಒಡಿಶಾ ರೈಲು ದುರಂತ: ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ ನಟಿ ಪ್ರಿಯಾ ಆನಂದ್!​

ನವದೆಹಲಿ: ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದ ಬಗ್ಗೆ ಖ್ಯಾತ ನಟಿ ಪ್ರಿಯಾ ಆನಂದ್​​ ಅವರು ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ದುರಂತಕ್ಕೆ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದ್ದಾರೆ.

ಈ ದುರಂತವು ಅಕ್ಷರಶಃ ವಿನಾಶಕಾರಿ. ಇದು ಸ್ವೀಕಾರವಲ್ಲದ ನಿರ್ಲಕ್ಷ್ಯ ಎಂದು ಟ್ವೀಟ್​ ಮಾಡುವ ಮೂಲಕ ಪ್ರಿಯಾ ಆನಂದ್​ ಅವರು ಬೇಸರದ ಜತೆಗೆ ಆಕ್ರೋಶವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ನಟಿಗೆ ಖಾಸಗಿ ಅಂಗ ಪ್ರದರ್ಶನ: ಜೈಲಿನಿಂದ ಬಿಡುಗಡೆಯಾದ ಆರೋಪಿಗೆ ಅದ್ಧೂರಿ ಸ್ವಾಗತ!

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ನಡೆದ ಎಕ್ಸ್‌ಪ್ರೆಸ್ ರೈಲುಗಳ ಭೀಕರ ಅಪಘಾತದಲ್ಲಿ 288 ಮಂದಿ ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪಶ್ಚಿಮ ಬಂಗಾಳದ ಹೌರಾ ನಗರದಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ಕೊರಮಂಡಲ್​​ ಎಕ್ಸ್​ಪ್ರೆಸ್​ ರೈಲಿನ ಕೆಲವು ಬೋಗಿಗಳು ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದವು. ಈ ವೇಳೆ ಮತ್ತೊಂದು ಕಡೆಯಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್​ಫಾಸ್ಟ್​ ಟ್ರೈನ್​ ಹಳಿಗಳ ಮೇಲೆ ಬಿದ್ದಿದ್ದ ಕೋರಮಂಡಲ್​ ಎಕ್ಸ್​ಪ್ರೆಸ್​ ಟ್ರೈನ್​ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ರೈಲು ಅಪಘಾತ ಸಂಭವಿಸಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಬ್​ ಶರ್ಮ ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್​)ಯ 3 ಘಟಕ, ಒಡಿಶಾದ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಒಡಿಆರ್​ಎಫ್​)ಯ 4 ಘಟಕ, 15ಕ್ಕೂ ಹೆಚ್ಚು ಅಗ್ನಿಶಾಮಕ ತಂಡ, 30ಕ್ಕೂ ಹೆಚ್ಚು ವೈದ್ಯರು, 200ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ಮತ್ತು 60ಕ್ಕೂ ಹೆಚ್ಚು ಆಂಬ್ಯುಲೆನ್ಸ್​ಗಳು ರಕ್ಷಣಾದಲ್ಲಿ ಕಾರ್ಯದಲ್ಲಿ ತೊಡಗಿದ್ದವು.

ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 50,000 ಪರಿಹಾರ ನೀಡುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಿಸಿದ್ದಾರೆ.

ಪ್ರಿಯಾ ಆನಂದ್​ ಅವರ ಬಗ್ಗೆ ಹೇಳುವುದಾದರೆ ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ರಾಜಕುಮಾರ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾದರು. ಪುನೀತ್​ ಅವರ ಕೊನೆಯ ಸಿನಿಮಾ ಜೇಮ್ಸ್​ ಚಿತ್ರದಲ್ಲೂ ಪ್ರಿಯಾ ಆನಂದ್​ ನಾಯಕಿಯಾದರು. ಟಾಲಿವುಡ್​ನಲ್ಲಿ ಪ್ರಿಯಾ ಆನಂದ್​ ಬಹುಬೇಡಿಕೆಯ ನಟಿಯಾಗಿದ್ದಾರೆ. (ಏಜೆನ್ಸೀಸ್​)