ನ್ಯೂಸ್

ರಜನಿಕಾಂತ್​ 'ತಲೈವರ್​ 171' ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ 'ಸಲಾರ್'​ ವಿಲನ್​?

ತಮಿಳುನಾಡು: ದಳಪತಿ ವಿಜಯ್​ ನಾಯಕನಾಗಿ ನಟಿಸಿದ ಬಹುನಿರೀಕ್ಷಿತ 'ಲಿಯೋ' ಸಿನಿಮಾವನ್ನು ನಿರ್ದೇಶಿಸಿರುವ ಕಾಲಿವುಡ್​ ನಿರ್ದೇಶಕ ಲೋಕೇಶ್​ ಕನಕರಾಜ್​ ಇದೀಗ ಚಿತ್ರಮಂದಿರಗಳಲ್ಲಿ ತಮ್ಮ ಚಿತ್ರಕ್ಕೆ ಅಭೂತಪೂರ್ವ ಬೆಂಬಲ, ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದಾರೆ.

'ಲಿಯೋ' ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸುತ್ತಿದ್ದು, ಈ ಮಧ್ಯೆಯೇ ನಿರ್ದೇಶಕ ಲೋಕೇಶ್​, ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ರಜನಿಕಾಂತ್​ ಅವರ ಮುಂದಿನ 'ತಲೈವರ್​ 171' ಚಿತ್ರವನ್ನು ಡೈರೆಕ್ಟ್​ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ಕಾಲಿವುಡ್‌ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿರುವ ಲೋಕೇಶ್ ಕನಕರಾಜ್, 'ಲಿಯೋ' ಮೂಲಕ ಭಾರತೀಯ ಚಿತ್ರರಂಗದ ಗಮನವನ್ನು ತಮ್ಮತ್ತ ಸೆಳೆಯುವಂತೆ ಮಾಡಿದ್ದಾರೆ. ಇತ್ತೀಚಿನ ವದಂತಿಗಳ ಪ್ರಕಾರ, ತಲೈವಾ ಅಭಿನಯದ 'ತಲೈವರ್ 171' ಚಿತ್ರದಲ್ಲಿ ಮಾಲಿವುಡ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಈ ಬಹುನಿರೀಕ್ಷಿತ ಚಿತ್ರವು 2024ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ತನ್ನ ನಿರ್ಮಾಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಆದ್ರೆ, ಇಲ್ಲಿಯವರೆಗೂ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ. ಪ್ರಭಾಸ್ ಅಭಿನಯದ 'ಸಲಾರ್‌' ಚಿತ್ರದಲ್ಲಿ ವಿಲನ್​ ಆಗಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದು, ಈ ಸಿನಿಮಾ ಇದೇ ಡಿಸೆಂಬರ್ 22 ರಂದು ಜಾಗತಿಕವಾಗಿ ಬಿಡುಗಡೆಗೊಳ್ಳಲು ಸಿದ್ಧಗೊಂಡಿದೆ,(ಏಜೆನ್ಸೀಸ್).