ಮುಂಬೈ: ವಾರಕ್ಕೆ 70 ಗಂಟೆ, 90 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆಗಳ ನಡುವೆ, ಶೇ. 78ರಷ್ಟು ನೌಕರರು ತಮ್ಮ ಮೊದಲ ಆದ್ಯತೆ ಕುಟುಂಬವೇ ಎಂಬುದನ್ನು ಸಮೀಕ್ಷೆಯೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.
‘ಇಂಡೀಡ್’ ಎಂಬ ಜಾಗತಿಕ ಮಟ್ಟದ ಉದ್ಯೋಗ ಜಾಲತಾಣ ಬಿಡುಗಡೆ ಮಾಡಿರುವ ‘ಭವಿಷ್ಯದ ವೃತ್ತಿಜೀವನ ನಿರ್ಣಯ’ ಕುರಿತ ಸಮೀಕ್ಷಾ ವರದಿಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ‘ವೃತ್ತಿಜೀವನಕ್ಕಿಂತ ತಂದೆ-ತಾಯಿ, ಪತ್ನಿ, ಮಕ್ಕಳ ಜತೆ ಸಮಯ ಸದುಪಯೋಗ ಮಾಡಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡುತ್ತೇವೆ. ಒತ್ತಡ ಕಡಿಮೆ ಇದ್ದಷ್ಟೂ ಒಳ್ಳೆಯದು. ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಜೀವನ ಅತಿ ಮುಖ್ಯ’ ಎಂದು ಉದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ.
‘ಹೆಚ್ಚು ಹಣ ಗಳಿಸುವುದು ಮುಖ್ಯವಾದರೂ ವೃತ್ತಿಜೀವನದಲ್ಲಿ ಮೇಲೇರುವುದಕ್ಕೆ ಮನಸ್ಸಿಲ್ಲ. ಕೆಲಸಕ್ಕೆ ಭದ್ರತೆ ಇದ್ದರೆ ಸಾಕು. ಉತ್ತಮ ಸಂಬಳ, ಒಳ್ಳೆಯ ವಾತಾವರಣ ಹೆಚ್ಚಿನ ವೇತನಕ್ಕಿಂತ ಮುಖ್ಯ’ ಎಂಬುದಾಗಿ ಸಮೀಕ್ಷೆಯಲ್ಲಿ ಸಂದರ್ಶನ ನೀಡಿದವರು ತಿಳಿಸಿದ್ದಾರೆ. ಸಮೀಕ್ಷೆಯ ವಿವರಗಳನ್ನು ಇಂಡೀಡ್ ಸಂಸ್ಥೆಯ ಮಾರುಕಟ್ಟೆ ನಿರ್ದೇಶಕಿ ರಾಷೇಲ್ ಟೌನ್ಸ್ಲೇ ಮಾಧ್ಯಮಗಳಿಗೆ ನೀಡಿದ್ದಾರೆ. 2024ರ ಡಿಸೆಂಬರ್ ಮತ್ತು 2025ರ ಜನವರಿ ನಡುವೆ ಈ ಸಮೀಕ್ಷೆ ನಡೆಸಲಾಗಿದ್ದು, ಸಿಂಗಪೂರ್, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾದ 6,126 ನೌಕರರನ್ನು ಸಂದರ್ಶಿಸಲಾಗಿದೆ.
ಭಾರತವೊಂದರಲ್ಲೇ 2,507 ಉದ್ಯೋಗಿಗಳ ಸಂದರ್ಶನ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಮುಂಬರುವ ವರ್ಷಗಳಲ್ಲಿ ವಿವಿಧ ವಲಯ ಮತ್ತು ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಶೇ. 55 ಜನರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಆಧುನಿಕ ಕೌಶಲಗಳು, ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕಲಿತುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
2025ರಲ್ಲಿ ವೃತ್ತಿಜೀವನದಲ್ಲಿ ಹೆಚ್ಚಿನ ಅವಕಾಶಗಳು ಲಭಿಸಬೇಕೆಂದರೆ ಎಮೋಷನಲ್ ಇಂಟೆಲಿಜೆನ್ಸ್, ಡೇಟಾ ಲಿಟರಸಿ, ವಿಶ್ಲೇಷಣಾ ಸಾಮರ್ಥ್ಯ ವೃದ್ಧಿ, ಎಐ, ಮಷಿನ್ ಲರ್ನಿಂಗ್, ಕೋಡಿಂಗ್ ಮುಂತಾದವುಗಳತ್ತ ಗಮನ ಹರಿಸಬೇಕಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಕಂಪನಿಗಳು ಸಾಂಪ್ರದಾಯಿಕ ವಾಗಿ ಪದವಿ, ವಿದ್ಯಾಭ್ಯಾಸ ನೋಡುವುದನ್ನು ಬಿಟ್ಟು ಕೌಶಲ ಆಧರಿಸಿ ನೇಮಕಾತಿಗಳನ್ನು ಮಾಡಿಕೊಳ್ಳಲಿವೆ ಎಂದು ಶೇ. 59ರಷ್ಟು ಜನರು ಈ ಸಮೀಕ್ಷೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.