ಭುವನೇಶ್ವರ್: ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ, ತಿದ್ದಿ ಬುದ್ದಿ ಹೇಳಿ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಿ ಮಾದರಿಯಾಗಬೇಕಾಗಿರುವ ಶಿಕ್ಷಕರೇ ಹಾದಿ ತಪ್ಪಿದರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಈ ಪ್ರಕರಣವೇ ಜೀವಂತ ಸಾಕ್ಷಿಯಾಗಿದೆ. ಓಡಿಶಾದ ನುವಾಟಿಪಿಲೆಯ ಭುವನ್ ಬ್ಲಾಕ್‌ನ ಧೆಂಕನಲ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಸರ್ಕಾರಿ ಶಾಲೆಯ ಮುಖ್ಯ ಪ್ರಾಂಶುಪಾಲ ಸ್ಕೂಲ್ಗೆ ಪಾನಮತ್ತನಾಗಿ ಬಂದಿದ್ದು, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಪ್ರಜ್ಞಾಹೀನನಾಗಿ ಮಲಗಿದ್ದು, ವಿದ್ಯಾರ್ಥಿಗಳು ಆತನ ಮುಖಕ್ಕೆ ನೀರು ಚಿಮುಕಿಸಿ ಆತನನ್ನು ಎದ್ದೇಳಿಸಲು ಪ್ರಯತ್ನಿಸುತ್ತಾರೆ. ಬೇರೆ ಶಿಕ್ಷಕರು ತರಗತಿಯ ಹೊರಗೆ ನಿಂತಿರುವುದನ್ನ ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: ದೆಹಲಿಗೂ ಬರಲಿದೆ ನಂದಿನಿ ಹಾಲು
ಕೆಲಸದ ಸಮಯದಲ್ಲಿ ಪಾನಮತ್ತನಾಗಿ ಶಾಲೆಗೆ ಬಂದ ಮುಖ್ಯ ಪ್ರಾಂಶುಪಾಲನ ಹೆಸರು ರವೀಂದ್ರನಾಥ್ ಮುರ್ಮು ಎಂದು ಹೇಳಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ತನಿಖೆಗೆ ಆದೇಶಿಸಿದ್ದು, ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ, ಈ ಹಿಂದೆಯೂ ಕೂಡ ರವೀಂದ್ರನಾಥ್ ಮುರ್ಮು ಅವರು ಹಲವು ಬಾರಿ ಶಾಲೆಗೆ ಈ ರೀತಿ ಪಾನಮತ್ತರಾಗಿ ಬಂದಿದ್ದು, ಅಮಾನತುಗೊಂಡಿದ್ದಾರೆ. ಇತ್ತೀಚಿಗೆ ಕೂಡ ಅಮಾನತು ಶಿಕ್ಷೆ ಮುಗಿಸಿ ಸೇವೆಗೆ ಮರಳಿದ್ದರು. ಈಗ ಮತ್ತೊಮ್ಮೆ ಈ ರೀತಿ ಮಾಡಿದ್ದು, ಅವರನ್ನು ಶಾಶ್ವತವಾಗಿ ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ತಿಳಿಸಿದ್ದಾರೆ.