ಗೌಹಾಟಿ : ಚುನಾವಣೆ ಪ್ರಚಾರ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಠಾತ್ತನೇ ತಮ್ಮ ಭಾಷಣ ನಿಲ್ಲಿಸಿದ ಪ್ರಸಂಗ ಇಂದು ಅಸ್ಸಾಂನಲ್ಲಿ ನಡೆದಿದೆ. ತಮ್ಮ ಭಾಷಣ ಕೇಳುತ್ತಿದ್ದ ವೃದ್ಧರೊಬ್ಬರು ಎಚ್ಚರ ತಪ್ಪಿ ಬಿದ್ದಿದ್ದನ್ನು ವೇದಿಕೆಯಿಂದಲೇ ಗಮನಿಸಿದ ಮೋದಿ, ಮಾತು ನಿಲ್ಲಿಸಿ ತಮ್ಮ ವೈದ್ಯಕೀಯ ತಂಡಕ್ಕೆ ಆತನ ಶುಶ್ರೂಷೆ ಮಾಡಲು ನಿರ್ದೇಶಿಸಿದ್ದಾರೆ.
ರಾಜ್ಯದ ತಮುಲ್ಪುರದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಜನರ ನಡುವೆ ವೃದ್ಧರೊಬ್ಬರು ಕೆಳಕ್ಕೆ ಬಿದ್ದಿದ್ದನ್ನು ಗಮನಿಸಿದರು. ತಮ್ಮ ಭಾಷಣವನ್ನು ನಿಲ್ಲಿಸಿ, ತಮ್ಮೊಡನೆ ಪ್ರವಾಸ ಮಾಡುವ ಪಿಎಂಒ ವೈದ್ಯಕೀಯ ತಂಡಕ್ಕೆ ಆ ವ್ಯಕ್ತಿಯ ಆರೈಕೆ ಮಾಡಿ ಎಂದು ಮೋದಿ ಮೈಕ್ನಲ್ಲೇ ಸೂಚನೆ ನೀಡಿದರು. 'ನೀರಿನ ಅಭಾವದಿಂದ ಸಮಸ್ಯೆಯಾಗಿರಬಹುದು, ತಕ್ಷಣ ನೋಡಿ' ಎನ್ನುತ್ತಾ ಕಾಳಜಿ ತೋರಿದರು.
ಉನ್ನತ ಸ್ಥಾನದಲ್ಲಿದ್ದುಕೊಂಡು ಮೋದಿ ಅವರು ಈ ರೀತಿಯ ಕಾಳಜಿ ತೋರಿದ ಪ್ರಸಂಗದ ವಿಡಿಯೋ ತುಣುಕನ್ನು ಬಿಜೆಪಿ ಹೆಮ್ಮೆಯಿಂದ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ.
ಬಿಜೆಪಿ ಕಾರ್ಯಕರ್ತ ವಯೋವೃದ್ಧ ಹರಿ ಚರಣ್ ದಾಸ್ ಎಂಬುವರು ಬಿಸಿಲಿನಲ್ಲಿ ನಿಂತುಕೊಂಡು ಭಾಷಣ ಕೇಳುತ್ತಿದ್ದು, ಡೀಹೈಡ್ರೇಟಾಗಿ ತಲೆ ಸುತ್ತಿ ಬಿದ್ದರು. ಅಕ್ಕಪಕ್ಕದ ಜನರು ಏನಾಯಿತು ಎಂದು ನೋಡುವಷ್ಟರಲ್ಲಿ ಮೋದಿ ಅವರು ತಮ್ಮ ವೈದ್ಯ ತಂಡಕ್ಕೆ ಸಹಾಯ ಮಾಡಲು ಹೇಳಿದರು. ಆ ವ್ಯಕ್ತಿಗೆ ಶುಶ್ರೂಷೆ ಮಾಡಲಾಗಿದ್ದು, ಈಗ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಪ್ರಧಾನ ಮಂತ್ರಿಯವರೊಂದಿಗೆ ಅವರೆಲ್ಲೇ ಹೋದರೂ ನಾಲ್ಕು ವೈದ್ಯಕೀಯ ತಜ್ಞರ ತಂಡ ಜೊತೆಯಲ್ಲಿರುತ್ತದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಒಬ್ಬ ಫಿಸಿಷಿಯನ್, ಒಬ್ಬ ಪ್ಯಾರಾಮೆಡಿಕ್, ಒಬ್ಬ ಸರ್ಜನ್ ಮತ್ತು ಒಬ್ಬ ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್ ಈ ತಂಡದಲ್ಲಿರುತ್ತಾರೆ.
ನಂತರ ಮಾತನಾಡಿದ ಮೋದಿ, ಅಸ್ಸಾಂನಲ್ಲಿ ಮತ್ತೆ ಎನ್ಡಿಎ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎನ್ಡಿಎನ ಡಬ್ಬಲ್ ಇಂಜಿನ್ ಸರ್ಕಾರವು ಐದು ವರ್ಷಗಳಿಂದ ಅಸ್ಸಾಂನ ಜನರಿಗೆ ಡಬ್ಬಲ್ ಪ್ರಯೋಜನಗಳನ್ನು ನೀಡುತ್ತಿದೆ ಎಂದರು. (ಏಜೆನ್ಸೀಸ್)