ಬೆಂಗಳೂರು: ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ, ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟನೆ ಹಿನ್ನೆಲೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು(ಶುಕ್ರವಾರ) ಬೆಂಗಳೂರಿಗೆ ಆಗಮಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಶಾಸಕರ ಭವನಕ್ಕೆ ತೆರಳಿದ ಮೋದಿ ಅವರು, ಬಳಿಕ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲಿಂದ ಮೆಜೆಸ್ಟಿಕ್ ಬಳಿಯ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದತ್ತ ರೋಡ್ ಶೋ ಮೂಲಕ ತೆರಳಿದರು. ಪ್ರಧಾನಿ ಅವರನ್ನ ಕಣ್ತುಂಬಿಕೊಳ್ಳಲು ಜನಸಾಗರವೇ ತಿಂತಿದೆ. ಪ್ರಧಾನಿ ಸಂಚರಿಸುವ ಮಾರ್ಗ ಕೇಸರಿಮಯವಾಗಿದೆ.
ಪ್ರಧಾನಿ ಅವರನ್ನ ನೋಡಲು ಮಹಾರಾಣಿ ಜಂಕ್ಷನ್ ಬಳಿ ಸೇರಿದ್ದ ನೂರಾರು ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾಕಿ ಜೈ, ನರೇಂದ್ರ ಮೋದಿಗೆ ಜೈ ಎಂದು ಘೋಷಣೆ ಮೊಳಗಿಸಿದರು. ಸನಾತನ ಹಿಂದೂ ಧರ್ಮಕಿ ಜೈ, ಹರ ಹರ ಮಹದೇವ ಎಂದೂ ಘೋಷಣೆ ಕೂಗಿ ಸಂಭ್ರಮಿಸಿದರು. ಜನರತ್ತ ಕೈಬೀಸಿದ ಪ್ರಧಾನಿ, ನಮಸ್ಕರಿಸಿದರು.