ನ್ಯೂಸ್

ಪ್ರಧಾನಿ ಕರೊನಾ ಪ್ಯಾಕೇಜ್ ಕ್ರೂರ ಜೋಕ್: ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸೋನಿಯಾ

ನವದೆಹಲಿ/ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ದೇಶದ ನಾನಾ ವಿರೋಧ ಪಕ್ಷಗಳ ನಾಯಕರ ಜತೆ ವಿಡಿಯೋ ಸಂವಾದ ನಡೆಸಿದರು.

‘‘ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಕರೊನಾ ಪ್ಯಾಕೇಜ್ ಬಡವರ ವಿರುದ್ಧ ಮಾಡಿರುವ ಒಂದು ಕ್ರೂರ ಹಾಸ್ಯ’’ ಎಂದು ಸೋನಿಯಾ ಬಣ್ಣಿಸಿದರು.

‘‘ಲಾಕ್‌ಡೌನ್ ಬಗ್ಗೆ ನಿರ್ದಿಷ್ಟ ನೀತಿ-ನಿಯಮಗಳನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿಲ್ಲ. ಅದನ್ನು ತೆರವುಗೊಳಿಸಬೇಕಾದ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆಯೂ ಅದಕ್ಕೆ ಸ್ಪಷ್ಟತೆ ಇಲ್ಲ’’ ಎಂದು ಆರೋಪಿಸಿದರು.

ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ‘‘ಕರೊನಾದಿಂದ ಇಡೀ ಮನುಕುಲವೇ ತಲ್ಲಣಿಸಿದೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ಪ್ರತಿಪಕ್ಷಗಳಾಗಿ ನಾವು ಇಡಬೇಕಾದ ಹೆಜ್ಜೆಗಳನ್ನು ದೃಢಪಡಿಸಿಕೊಳ್ಳಬೇಕಿದೆ’’ ಎಂದು ಸಲಹೆ ನೀಡಿದರು.

‘‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಿ ಎಡವಿವೆ ಎಂಬುದನ್ನು ನಾವು ಎತ್ತಿ ತೋರಬೇಕಿದೆ. ಸರ್ಕಾರಗಳಿಗೆ ನಾವು ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಹೊಣೆಗಾರಿಕೆಯನ್ನು ನಿರ್ವಹಿಸುವಂತೆ ಮಾಡಬೇಕಿದೆ. ಈ ದಿಸೆಯಲ್ಲಿ ಪ್ರತಿಪಕ್ಷಗಳಉ ಹಮ್ಮಿಕೊಳ್ಳುವ ಪ್ರತಿಭಟನೆ, ಹೋರಾಟಕ್ಕೆ ನಮ್ಮ ಬೆಂಬಲವಿದೆ’’ ಎಂದರು.

ವಿಡಿಯೋ ಸಂವಾದದಲ್ಲಿ ದೇಶದ 22 ಪ್ರಾದೇಶಿಕ ಪಕ್ಷಗಳು ಹಾಗೂ ಇತರ ಕೆಲವು ರಾಷ್ಟ್ರೀಯ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.