ನ್ಯೂಸ್

ಅತ್ಯಾಚಾರಿ ಪಾದ್ರಿ ಆಕೆಯನ್ನು ಮದುವೆಯಾಗಿ, ಮಗು ನೋಡಿಕೊಳ್ಳುವೆ ಎಂದು ಕೋರ್ಟ್ ಮೊರೆಹೋದ..

ತಿರುವನಂತಪುರಂ: ಅತ್ಯಾಚಾರವೆಸಗಿದ ಆರೋಪಿ ಪಾದ್ರಿ ರಾಬಿನ್ ವಡಕ್ಕುಂಚೇರಿ ಕೇರಳ ಹೈಕೋರ್ಟ್‌ಗೆ ಎರಡು ತಿಂಗಳು ಜಾಮೀನು ಕೋರಿ ಕೋರಿದ್ದಾನೆ.

ಅಷ್ಟೆ ಅಲ್ಲದೆ, ಸಂತ್ರಸ್ತೆಯನ್ನು ಮದುವೆಯಾಗಲು ಮತ್ತು ಅವಳಿಗೆ ಜನಿಸಿದ ಮಗುವನ್ನು ನೋಡಿಕೊಳ್ಳಲು ಬಯಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.

ಕಳೆದ ವರ್ಷ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ್ದು, ಆಕೆ ಗರ್ಭಿಣಿಯಾಗಿರುವುದಕ್ಕೆ ಕಾಮುಕ ಪಾದ್ರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.

"ಪ್ರತಿ ಅತ್ಯಾಚಾರ ಅಪರಾಧಿಯೂ ಸಂತ್ರಸ್ತೆಯನ್ನು ಮದುವೆಯಾಗಲು ಮುಂದಾಗಬಹುದು, ಅಂತಹ ನಡೆಯನ್ನು ನಾವು ಪ್ರೊತ್ಸಾಹಿಸಲು ಸಾಧ್ಯವಿಲ್ಲ" ಎಂದು ಸಾರ್ವಜನಿಕ ಅಭಿಯೋಜಕಿ ಸುಮನ್ ಚಕ್ರವರ್ತಿ ಹೇಳಿದರು, ಜಾಮೀನು ಕೋರಿ ನ್ಯಾಯಾಲಯಕ್ಕೆ ಹೋಗುವುದು 20 ವರ್ಷಗಳ ಜೈಲು ಶಿಕ್ಷೆಯಿಂದ ಪಾರಾಗಲು ಕಂಡುಕೊಳ್ಳುವ ಮಾರ್ಗವೆಂಬಂತಾಗಿದೆ ಎಂದರು.

2019 ರ ಫೆಬ್ರವರಿ 17 ರಂದು ಥಲಸ್ಸರಿ ಪೊಕ್ಸೊ ನ್ಯಾಯಾಲಯವು ರಾಬಿನ್‌ಗೆ 60 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ನಂತರ ನ್ಯಾಯಾಲಯವು ಈ ಅವಧಿಯನ್ನು 20 ವರ್ಷಗಳಿಗೆ ಇಳಿಸಿ, ಮೂರು ಶಿಕ್ಷೆಗಳನ್ನು ಒಟ್ಟಿಗೆ ಪೂರೈಸಲು ಅವಕಾಶ ಮಾಡಿಕೊಟ್ಟಿತು.

ಘಟನೆ ಸಂಭವಿಸಿದ್ದು ಹೀಗೆ; ರಾಬಿನ್ ಕಣ್ಣೂರು ಬಳಿ ಪ್ಯಾರಿಷ್ ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮತ್ತು ಚರ್ಚ್ ಬೆಂಬಲಿತ ಶಾಲೆಯ ವ್ಯವಸ್ಥಾಪಕನಾಗಿದ್ದ. ಆ ವೇಳೆ ಶಾಲೆಯ 11 ನೇ ತರಗತಿ ವಿದ್ಯಾರ್ಥಿನಿಯಾಗಿದ್ದ 16 ವರ್ಷದ ಬಾಲಕಿ ಮೇಲೆ ಈ ಪಾದ್ರಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ. 2017 ರ ಫೆಬ್ರವರಿ 7 ರಂದು ಆ ಬಾಲಕಿ ಕಣ್ಣೂರಿನ ಕ್ರಿಸ್ಟು ರಾಜ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ, ನೀಡಿದಳು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿ ಏಜೆನ್ಸಿ ದೂರು ದಾಖಲಿಸಿತ್ತು. ಆರಂಭದಲ್ಲಿ, ಅತ್ಯಾಚಾರ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ರಾಬಿನ್‌ನ ಮಿತ್ರರಿಂದ ಒತ್ತಡಕ್ಕೊಳಗಾಗಿದ್ದ ಎನ್ನಲಾಗಿದೆ.

ಆದರೆ ಡಿಎನ್‌ಎ ಪರೀಕ್ಷೆ ನಡೆಸಿದಾಗ, ರಾಬಿನ್ ಆ ಮಗುವಿನ ತಂದೆ ಎಂದು ತಿಳಿದುಬಂತು. 2018 ರ ಫೆಬ್ರವರಿ 27 ರಂದು ಪಾದ್ರಿಯನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಆರು ಜನರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ವಿಚಾರಣೆಯ ವೇಳೆ ಸಂತ್ರಸ್ತೆ ತಾನೀಗ ಅಪ್ರಾಪ್ತೆಯಲ್ಲ, ತಾನು ರಾಬಿನ್‌ನನ್ನು ಮದುವೆಯಾಗಿ ಮಗುವನ್ನು ಅವನೊಂದಿಗೆ ಬೆಳೆಸಲು ಬಯಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ.

ಬಾಲಕಿಯ ಮೇಲೆ ಅತ್ಯಾಚಾರ ನಡೆದಾಗ ಆಕೆ ಅಪ್ರಾಪ್ತ ಬಾಲಕಿ ಎಂಬ ಸಾಕ್ಷ್ಯಾಧಾರದ ಮೇಲೆ ನ್ಯಾಯಾಲಯ ತನ್ನ ನಿರ್ಧಾರವನ್ನು ತೆಗೆದುಕೊಂಡಿದ್ದು, ಮಗುವಿನ ಡಿಎನ್‌ಎ ಮಾದರಿಗಳನ್ನು ಪರಿಗಣನೆಗೆ ತೆಗೆದುಕೊಂಡಿತ್ತು.

ತನ್ನ ನಿರ್ಧಾರವನ್ನು ಪ್ರಕಟಿಸಿದ ನಂತರ ನ್ಯಾಯಾಲಯವು ಬಾಲಕಿ ಮತ್ತು ಆಕೆಯ ಮಗುವಿನ ರಕ್ಷಣೆಯನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಸ್ತಾಂತರಿಸಿದೆ.