ನ್ಯೂಸ್

ಇನ್ಮುಂದೆ ಇಂದಿರಾ ಕ್ಯಾಂಟಿನ್​ನಲ್ಲಿ ಊಟ ದುಬಾರಿ; ದರ ಹೆಚ್ಚಳಕ್ಕೆ ಸಂಪುಟ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ಇಂದಿರಾ ಕ್ಯಾಂಟೀನ್​ನಲ್ಲಿ ಬಡವರಿಗೆ ನೀಡಲಾಗುತ್ತಿದ್ದ ಊಟದ ದರವನ್ನು ಹೆಚ್ಚಿಸಲು ರಾಜ್ಯ ಕಾಂಗ್ರೆಸ್​ ಸರ್ಕಾರ ನಿರ್ಧರಿಸಿದೆ. ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗ ನಿರ್ಧರಿಸಲಾಗಿದ್ದು, ಒಂದು ಊಟಕ್ಕೆ 25 ರೂಪಾಯಿ ದರವನ್ನು ನಿಗದಿ ಮಾಡಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಎಚ್​.ಕೆ. ಪಾಟೀಲ್​ ನೂತನವಾಗಿ ನಿರ್ಮಾಣವಾಗಲಿರುವ ಇಂದಿರಾ ಕ್ಯಾಂಟೀನ್​ಗಳಲ್ಲಿ ಈ ಹೊಸ ದರ ಅನ್ವಯವಾಗಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕ್ಯಾಂಟೀನ್​ಗಳಲ್ಲಿ ಹಳೇ ದರವೇ ಮುಂದುವರೆಯಲಿದೆ. ಹೊಸ ದರದ ಪ್ರಕಾರ ಒಂದು ಊಟಕ್ಕೆ 25 ರೂಪಾಯಿ ದರವನ್ನು ನಿಗದಿ ಮಾಡಲಾಗಿದೆ.

ಬಿಬಿಎಂಪಿ  ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್​ ತೆರೆಯಲು ಒಪ್ಪಿಗೆ ನೀಡಲಾಗಿದೆ. ಹೊಸ ಇಂದಿರಾ ಕ್ಯಾಂಟೀನ್​ಗೆ 27 ಕೋಟಿ ರೂ. ಮೀಸಲಿಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ. ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯ ತಿಂಡಿ-ತಿನಿಸುಗಳನ್ನು ಗಮನದಲ್ಲಿಟ್ಟುಕೊಂಡು ಮೆನು ಸಿದ್ದಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್​ನಲ್ಲಿ ಪ್ರತಿ ದಿನ ಊಟ ತಯಾರಿಸಲು 62 ರೂಪಾಯಿ ವೆಚ್ಚ ತಗುಲುತ್ತದೆ. ಸಾರ್ವಜನಿಕರಿಂದ ಸಂಗ್ರಹಿಸುವ 25 ರೂಪಾಯಿ ಉಪಹಾರ ಮತ್ತು ಎರಡು ಊಟದ ವೆಚ್ಚವಾಗಿರುತ್ತದೆ. ಉಳಿದ 37 ರೂಪಾಯಿ ಆಹಾರ ತಯಾರಿಸುವ ಕಂಪನಿಗೆ ಸರ್ಕಾರದ ವತಿಯಿಂದ ಸಬ್ಸಿಡಿ ನೀಡಲಾಗುವುದು ಎಂದು ಸಂಪುಟ ಸಭೆ ಬಳಿಕ ಸಚಿವ ಎಚ್.ಕೆ. ಪಾಟೀಲ್ ದರ ಹೆಚ್ಚಳ ಕುರಿತು ಸ್ಪಷ್ಟಪಡಿಸಿದ್ದಾರೆ.