ನ್ಯೂಸ್

ಜನವರಿಗೆ ಪ್ರಿಪೇಯ್ಡ್​ ಮೀಟರ್, ಸರ್ಕಾರಿ ಕಚೇರಿಗಳಿಗೆ ಅಳವಡಿಕೆ: ಸಚಿವ ಸುನೀಲ್​ಕುಮಾರ್ ಮಾಹಿತಿ

Webdesk - Ravikanth

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಿಗೆ ಪ್ರಿಪೇಯ್್ಡ ವಿದ್ಯುತ್ ಮೀಟರ್​ಗಳನ್ನು ಜನವರಿಯಿಂದ ಅಳವಡಿಸಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ವಿಜಯವಾಣಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಈ ಮಾಹಿತಿ ನೀಡಿದ್ದಾರೆ. ಪ್ರಿಪೇಯ್್ಡ ಮೀಟರ್ ಅಳವಡಿಕೆ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು, ಮೊದಲ ಹಂತದಲ್ಲಿ ಸರ್ಕಾರಿ ಕಚೇರಿಗಳಿಗೆ ಅಳವಡಿಸಲು ತೀರ್ವನಿಸಲಾಗಿದೆ ಎಂದರು.

ಸರ್ಕಾರಿ ಕಚೇರಿಗಳಿಂದ ಬರಬೇಕಾಗಿರುವ ವಿದ್ಯುತ್ ಶುಲ್ಕದ ಬಾಕಿಯೇ 6 ಸಾವಿರ ಕೋಟಿ ರೂ.ಗಳಷ್ಟಿದೆ. ಇನ್ನೊಂದೆಡೆ ಸರ್ಕಾರ 16 ಸಾವಿರ ಕೋಟಿ ರೂ.ಗಳ ಸಬ್ಸಿಡಿ ನೀಡುತ್ತಿದೆ. ಆದ್ದರಿಂದ ಪ್ರಿಪೇಯ್್ಡ ಮೀಟರ್ ಅಳವಡಿಕೆ ಮೂಲಕ ವಿದ್ಯುತ್ ಬಿಲ್ ಕಟ್ಟುವುದನ್ನು ಮೊದಲು ಸರ್ಕಾರಿ ವ್ಯವಸ್ಥೆಯಲ್ಲಿಯೇ ಸುಸಜ್ಜಿತಗೊಳಿಸಲಾಗುವುದು ಎಂದರು.

ವರ್ಷಕ್ಕೊಮ್ಮೆ ವಿದ್ಯುತ್ ದರ ಪರಿಷ್ಕರಣೆ: ಪ್ರಸ್ತುತ ಪ್ರತಿ 3 ತಿಂಗಳಿಗೊಮ್ಮೆ ಇಂಧನ ಹೊಂದಾಣಿಕೆ ವೆಚ್ಚ ಪರಿಷ್ಕರಣೆ ಮಾಡುವ ಬದಲು ಪ್ರತಿವರ್ಷ ಕೆಇಆರ್​ಸಿ ವಿದ್ಯುತ್ ದರ ಪರಿಷ್ಕರಣೆ ಸಂದರ್ಭದಲ್ಲಿಯೇ ಇಂಧನ ವೆಚ್ಚ ಪರಿಷ್ಕರಣೆ ಮಾಡಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಜತೆಗೂ ಚರ್ಚೆ ಮಾಡಲಾಗಿದೆ. ಮುಂದಿನ ವರ್ಷದಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದರು.

ವರ್ಷಕ್ಕೊಮ್ಮೆ ವಿದ್ಯುತ್ ಪರಿಷ್ಕರಣೆ ಮಾಡಿದ ನಂತರವೂ ಮೂರು ತಿಂಗಳಿಗೊಮ್ಮೆ ಇಂಧನ ವೆಚ್ಚ ಹೊಂದಾಣಿಕೆ ಮಾಡುತ್ತಿರುವುದರಿಂದ ಆಗಿಂದಾಗ್ಗೆ ವಿದ್ಯುತ್ ಬೆಲೆ ಏರಿಕೆ ಆಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದನ್ನು ತಪ್ಪಿಸಲು ಈ ನಿರ್ಣಯಕ್ಕೆ ಬರಲಾಗಿದೆ ಎಂದು ತಿಳಿಸಿದರು.

21 ಸಾವಿರ ಕೋಟಿ ಬಾಕಿ: ರಾಜ್ಯದಲ್ಲಿ ರೈತರ 36 ಲಕ್ಷ ಪಂಪ್​ಸೆಟ್​ಗಳಿದ್ದು, ಅವುಗಳಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಪ್ರತಿವರ್ಷ ಇದಕ್ಕಾಗಿಯೇ ರಾಜ್ಯ ಸರ್ಕಾರ 16 ಸಾವಿರ ಕೋಟಿ ರೂ.ಗಳನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತಿದೆ. ಇನ್ನು ಸರ್ಕಾರದಿಂದ ಬರಬೇಕಾಗಿರುವ ಬಾಕಿ ಮೊತ್ತ 6 ಸಾವಿರ ಕೋಟಿ ರೂ.ಗಳಾಗಿದ್ದು, ಹೀಗಾಗಿ ಒಟ್ಟು 21 ಸಾವಿರ ಕೋಟಿ ರೂ. ಇಲಾಖೆಗೆ ಬರಬೇಕಿದೆ. ಇಂಥ ಪರಿಸ್ಥಿತಿಯಲ್ಲಿ ಇಲಾಖೆ ನಡೆಸುವುದು ಹೇಗೆ? ಎನ್ನುವ ಚಿಂತೆಯೂ ಇದೆ. ಒಂದಷ್ಟು ಸುಧಾರಣೆಗಳನ್ನು ತರಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

76 ಅಧಿಕಾರಿಗಳ ಅಮಾನತು: ಇಂಧನ ಇಲಾಖೆಯಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದೂರುಗಳು ಬಂದ ಕಡೆಯಲ್ಲಿ ಪರಿಶೀಲನೆ ಮಾಡಿ 76 ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇಲಾಖೆಗೆ ಹೊಸ ರೂಪ ನೀಡಲು ಶ್ರಮಿಸಲಾಗುತ್ತಿದೆ ಎಂದು ಸುನೀಲ್ ಕುಮಾರ್ ಹೇಳಿದರು.

ಸೌರ ವಿದ್ಯುತ್ ಸಂಗ್ರಹ ಯೋಜನೆ: ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಸರ್ಕಾರ ಸ್ವಾವಲಂಬಿಯಾಗಿದೆ. ಬೆಳಗ್ಗೆ ಹೊತ್ತು ಸೋಲಾರ್ ಮತ್ತು ಪವನ ವಿದ್ಯುತ್ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿದೆ. ಆದರೆ, ರಾತ್ರಿ ಹೊತ್ತು ವಿದ್ಯುತ್ ಬೇಡಿಕೆ ಹೆಚ್ಚು ಇರುವುದರಿಂದ ಆಗ ಸೋಲಾರ್ ಮತ್ತು ಪವನ ವಿದ್ಯುತ್ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಬ್ಯಾಟರಿ ಮೂಲಕ ಈ ವಿದ್ಯುತ್ ಸಂಗ್ರಹಕ್ಕೆ ಯೋಜಿಸಲಾಗಿದೆ. ವಿದ್ಯುತ್ ಸ್ಟೋರೇಜ್ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಗುಜರಾತ್ ಮತ್ತಿತರ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲಾಗುವುದು. ಪ್ರಾಯೋಗಿಕವಾಗಿ ಪಾವಗಡದಲ್ಲಿ 50 ಮೆಗಾವಾಟ್ ವಿದ್ಯುತ್ ಸ್ಟೋರೇಜ್ ಪ್ಲಾಂಟ್ ನಿರ್ವಣಕ್ಕೆ ಚಿಂತನೆ ನಡೆದಿದೆ ಎಂದರು.

1,800 ಹುದ್ದೆಗಳ ನೇಮಕಾತಿ: ಇಂಧನ ಇಲಾಖೆಯಲ್ಲಿ ಖಾಲಿ ಇರುವ ನಾನಾ ಹುದ್ದೆಗಳಿಗೆ 1,800 ಜನರ ನೇಮಕಾತಿ ಮಾಡಲಾಗಿದೆ. ಇನ್ನು 2,500 ಹುದ್ದೆಗಳ ಭರ್ತಿಗೆ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವ ಸುನೀಲ್​ಕುಮಾರ್ ತಿಳಿಸಿದರು.

ಕಲ್ಲಿದ್ದಲು ಸಮಸ್ಯೆ ಇಲ್ಲ: ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಮಸ್ಯೆ ಇಲ್ಲ. 8-10 ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರುತ್ತದೆ. ಕಲ್ಲಿದ್ದಲಿಗಾಗಿ ಹಣ ಪಾವತಿಗೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ. ಮೊದಲಿನಂತೆ ತಿಂಗಳುಗಟ್ಟಲೆ ಬಿಲ್ ಬಾಕಿ ಉಳಿಸಿಕೊಳ್ಳುವಂತಿಲ್ಲ ಎಂದರು.