ಬೆಂಗಳೂರು:'ಡಾಲಿ' ಧನಂಜಯ್ ನಿರ್ಮಾಣದ 'ಟಗರು ಪಲ್ಯ' ಚಿತ್ರಕ್ಕೆ ಅವರ ಕ್ಲೋಸ್ ಫ್ರೆಂಡ್ ನಾಗಭೂಷಣ್ ನಾಯಕನಾಗಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಈಗ ಆ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದ್ದಾರೆ. 'ನೆನಪಿರಲಿ' ಪ್ರೇಮ್ ಮಗಳು ಅಮೃತಾ ಈ ಚಿತ್ರಕ್ಕೆ ನಾಯಕಿಯಾಗುವ ಮೂಲಕ, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಇದನ್ನೂ ಓದಿ: ಡಾ.ವಿಷ್ಣುವರ್ಧನ್ ಅವರ ಹೊಸ ಮನೆಯ ಗೃಹ ಪ್ರವೇಶ …
'ನೆನಪಿರಲಿ' ಪ್ರೇಮ್ ಮಗ ಏಕಾಂತ್ ಈಗಾಗಲೇ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಶರಣ್ ಅಭಿನಯದ 'ಗುರು ಶಿಷ್ಯರು' ಚಿತ್ರದಲ್ಲೂ ಅವರೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರ ಅಕ್ಕ ಅಮೃತಾ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ನಾಗಭೂಷಣ್ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರವನ್ನು ಉಮೇಶ್ ಕೆ. ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಕಥೆಗೆ ತಕ್ಕ ನಾಯಕಿಯ ಪಾತ್ರಕ್ಕಾಗಿ ಹುಡುಕಾಟ ನಡೆಸಿದ್ದರಂತೆ. ಆ ಸಂದರ್ಭದಲ್ಲಿ ಒಂದು ಕಾರ್ಯಕ್ರಮದಲ್ಲಿ ಪ್ರೇಮ್ ಅವರ ಮಗಳನ್ನು ನೋಡಿದ್ದಾರೆ. ಅಮೃತಾ ಆ ಪಾತ್ರಕ್ಕೆ ಹೊಂದುತ್ತಾರೆ ಎಂದು ಪ್ರೇಮ್ ಅವರನ್ನು ಸಂಪರ್ಕಿಸಿದ್ದಾರೆ. ಮಗಳಿಗೆ ಇಷ್ಟವಾದರೆ ತಮಗೂ ಓಕೆ ಎಂದು ಪ್ರೇಮ್ ಸಹ ಹೇಳಿದ್ದಾರೆ. ಕಥೆ ಇಷ್ಟಪಟ್ಟ ಅಮೃತಾ, ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.
ಸದ್ಯ ಇಂಜಿನಿಯರಿಂಗ್ ಓದುತ್ತಿರುವ ಅಮೃತಾ, 'ಟಗರು ಪಲ್ಯ' ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಾಗಭೂಷಣ್ ಮತ್ತು ಅಮೃತಾ ಅಲ್ಲದೆ, ಚಿತ್ರದಲ್ಲಿ ರಂಗಾಯಣ ರಘು, ಶರತ್ ಲೋಹಿತಾಶ್ವ, ತಾರಾ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತವಿದೆ.