ನ್ಯೂಸ್

'ಟಗರು ಪಲ್ಯ': ಮಗಳನ್ನು ತಬ್ಬಿ ಕಣ್ಣೀರಿಟ್ಟ ನಟ ಪ್ರೇಮ್​!

ಬೆಂಗಳೂರು: ಇಂದು ರಾಜ್ಯಾದ್ಯಂತ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಡಾಲಿ ಫಿಕ್ಷರ್ಸ್​ನ 'ಟಗರು ಪಲ್ಯ' ಸಿನಿಮಾ ಮೊದಲ ದಿನವೇ ಉತ್ತಮ ಓಪನಿಂಗ್​ ಪಡೆದುಕೊಂಡಿದ್ದು, ಸಿನಿಪ್ರೇಕ್ಷಕರಿಂದ ಪಾಸಿಟಿವ್​ ರೆಸ್ಪಾನ್ಸ್​ ಗಳಿಸುತ್ತಿದೆ. ಈ ಚಿತ್ರದ ಮುಖೇನ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುತ್ರಿ ಅಮೃತಾ ಪ್ರೇಮ್​ ಅವರನ್ನು ನಟ ಲವ್ಲಿ ಸ್ಟಾರ್​ ಪ್ರೇಮ್​ ತಬ್ಬಿ ಕಣ್ಣೀರಿಟ್ಟಿದ್ದಾರೆ.

175 ಥಿಯೇಟರ್​ಗಳಲ್ಲಿ ಬಿಡುಗಡೆಗೊಂಡಿರುವ 'ಟಗರು ಪಲ್ಯ' ಡಾಲಿ ಪಿಕ್ಚರ್ಸ್ ಬ್ಯಾನರ್​ನಡಿ ಮೂಡಿಬಂದ ಮೂರನೇ‌ ಸಿನಿಮಾವಾಗಿದೆ. ನಟ ನಾಗಭೂಷಣ್​ ಹಾಗೂ ಅಮೃತಾ ಪ್ರೇಮ್​ ಮುಖ್ಯಭೂಮಿಕೆಯಲ್ಲಿ ನಟಿಸಿದ ಈ ಚಿತ್ರ ಹಳ್ಳಿ ಸೊಗಡು, ಗ್ರಾಮೀಣ ಭಾಗದ ಕಥೆಯನ್ನು ಹೊಂದಿದೆ. ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ ಪುತ್ರಿ ಅಮೃತಾ ನಟನೆಯನ್ನು ತಮ್ಮ ಕುಟುಂಬದವರೊಂದಿಗೆ ವೀಕ್ಷಿಸಿದ ಪ್ರೇಮ್​ ವೇದಿಕೆಯ ಮೇಲೆ ಭಾವುಕರಾದರು.

"ನನ್ನ ಮಗಳ ಸಿನಿಮಾವನ್ನು ಕುಟುಂಬದೊಂದಿಗೆ ನೋಡಿದೆ. ಎಲ್ಲರಿಗೂ ದಸರಾ ಹಬ್ಬ ಮುಗಿತು. ಆದ್ರೆ, ನನಗೆ ಇಂದು, ಇದೇ ದಸರಾ, ದೀಪಾವಳಿ ಹಬ್ಬ. ಒಬ್ಬ ತಂದೆಯಾಗಿ, ನಟನಾಗಿ ನನ್ನ ಮಗಳ ಸಿನಿಮಾ ನೋಡಿದ್ದು ನನಗೆ ಹೆಮ್ಮೆ. ಚಿತ್ರ ನೋಡ್ತಾ, ನೋಡ್ತಾ ಆ ಕಥೆಗೆ ಕನೆಕ್ಟ್​ ಆದೆ. ಚಿತ್ರತಂಡಕ್ಕೆ ಎಷ್ಟು ಧನ್ಯವಾದ ಹೇಳಬೇಕೋ ಅಷ್ಟೇ ಪ್ರಮಾಣದಲ್ಲಿ ನನ್ನ ಶ್ರೀಮತಿಗೆ ಥ್ಯಾಂಕ್ಯೂ ಹೇಳ್ತೀನಿ" ಎಂದು ಪ್ರೇಮ್​ ವೇದಿಕೆಯ ಮೇಲೆ ಭಾವುಕರಾಗಿ ಮಾತನಾಡಿದರು.

'ಟಗರು ಪಲ್ಯ' ಚಿತ್ರದಲ್ಲಿ ನಾಗಭೂಷಣ್‌, ಅಮೃತಾ ಪ್ರೇಮ್, ರಂಗಾಯಣ ರಘು, ತಾರಾ ಅನುರಾಧ, ವಾಸುಕಿ, ಪೂರ್ಣಚಂದ್ರ, ವೈಜನಾಥ್‌ ಬಿರಾದಾರ್‌, ಚಿತ್ರಾ ಶೆಣೈ, ಶ್ರೀನಾಥ್‌ ವಸಿಷ್ಠ ತಾರಾಗಣವಿದೆ. ಚಿತ್ರಕ್ಕೆ ಸ್ಯಾಂಡಲ್​ವುಡ್​ನ ಖ್ಯಾತ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.