ನ್ಯೂಸ್

ಒಮ್ಮೆ ಪಾಸಿಟಿವ್​, ಇನ್ನೊಮ್ಮೆ ನೆಗೆಟಿವ್​, ತುಂಬು ಗರ್ಭಿಣಿ ಸ್ಥಿತಿ ಅಯೋಮಯ!

ಬೆಂಗಳೂರು: ಈಕೆ 9 ತಿಂಗಳ ತುಂಬು ಗರ್ಭಿಣಿ. ಇದೇ ವಾರದಲ್ಲಿ ಇವರ ಪ್ರಸವದ ದಿನಾಂಕವೂ ಫಿಕ್ಸ್​ ಆಗಿದೆ. ಆದರೆ ಕರೊನಾ ಸೋಂಕಿತೆ ಎಂದು ವೈದ್ಯರು ತಿಳಿಸಿದ ಕಾರಣದಿಂದ ಕೆಲವು ದಿನಗಳಿಂದ ಇವರ ಸ್ಥಿತಿ ಹೇಳತೀರದಾಗಿತ್ತು. ತೀರಾ ಒತ್ತಡದಲ್ಲಿಯೇ ದಿನ ಕಳೆಯುತ್ತಿದ್ದ ಈ ಗರ್ಭಿಣಿಯ ಇನ್ನೊಂದು ರಿಪೋರ್ಟ್​ ಈಗ ಬಂದಿದೆ. ಅದರಲ್ಲಿ ಇವರಿಗೆ ಕರೊನಾ ಸೋಂಕು ಇರಲೇ ಇಲ್ಲ ಎಂದು ಗೊತ್ತಾಗಿದೆ!

ಹೌದು. ಇಂಥದ್ದೊಂದು ಎಡವಟ್ಟು ಖಾಸಗಿ ವೈದ್ಯರಿಂದ ಆಗಿಬಿಟ್ಟಿದೆ. ಅದು ಬೇರೆಲ್ಲೂ ಅಲ್ಲ. ಬೆಂಗಳೂರಿನಲ್ಲಿಯೇ! ಪೊಲೀಸ್​ ಕಾನ್ಸ್​ಟೆಬಲ್​ ಸೋಂಕಿತ ಅಲ್ಲದಿದ್ದರೂ ಅವರು ಸೋಂಕಿತರೆಂದು ವರದಿ ನೀಡಿದ್ದ ವೈದ್ಯರೀಗ ಅದರ ಬೆನ್ನಲ್ಲೇ ಇನ್ನೊಂದು ದೊಡ್ಡ ಪ್ರಮಾದ ಎಸಗಿಬಿಟ್ಟಿದ್ದಾರೆ.

ಮಹಿಳೆ ಬೆಂಗಳೂರಿನ ಬಿಟಿಎಂ ಲೇಔಟ್​ನ ನಿವಾಸಿ. ಇವರು ಖಾಸಗಿ ಲ್ಯಾಬ್​ ಒಂದರಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದ ಸಂದರ್ಭದಲ್ಲಿ ಅವರಿಗೆ ಕರೊನಾ ಪಾಸಿಟಿವ್​ ಇದೆ ಎಂದು ವರದಿ ನೀಡಲಾಗಿತ್ತು. ನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್​ಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಸರ್ಕಾರಿ ಲ್ಯಾಬ್​ನಲ್ಲಿ ಸ್ಯಾಂಪಲ್ ಪರೀಕ್ಷಿಸಿದಾಗ ನೆಗೆಟಿವ್ ರಿಪೋರ್ಟ್​ ಬಂದಿದೆ.

ಆದರೆ ಗ್ರಹಚಾರ ನೋಡಿ. ಇದಾಗಲೇ ಸೋಂಕಿತರ ವಾರ್ಡ್​​ನಲ್ಲಿಯೇ ಇವರು ಇದ್ದುದರಿಂದ ಮತ್ತೆ 14 ದಿನ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಈ ನಡುವೆ ಇವರಿಗೆ ಡೆಲಿವರಿ ಡೇಟನ್ನೂ ನೀಡಲಾಗಿದೆ. ಗರ್ಭದಲ್ಲಿ ಮಗುವನ್ನು ಹೊತ್ತು ತಾನೊಬ್ಬ ಸೋಂಕಿತೆ ಎಂದು ಇವರು ಇಷ್ಟು ದಿನ ಅನುಭವಿಸಿರುವ ನೋವಿಗೆ ಲೆಕ್ಕ ಕೊಡುವವರಾರು!

ಪೊಲೀಸ್​ ಕಾನ್ಸ್​ಟೆಬಲ್​ ವಿಷಯದಲ್ಲಿ ಆದದ್ದೇನೆಂದರೆ, ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ಪರೀಕ್ಷೆಗೆಂದು ಖಾಸಗಿ ಲ್ಯಾಬ್​ಗೆ ಹೋಗಿದ್ದರು. ಅದರಲ್ಲಿ ಒಬ್ಬನಿಗೆ ಸೋಂಕು ಇತ್ತು, ಇನ್ನೊಬ್ಬರು ಪೊಲೀಸ್​ ಪೇದೆ. ಅವರಿಗೆ ಸೋಂಕು ಇರಲಿಲ್ಲ. ಆದರೆ ಲ್ಯಾಬ್​ ಎಡವಟ್ಟಿನಿಂದ ಸೋಂಕು ಇಲ್ಲದ ಪೇದೆಗೆ ಇದೆಯೆಂದು ಹೇಳಿ ಅಡ್ಮಿಟ್​ ಮಾಡಲಾಗಿತ್ತು.

ಆದರೆ ನಂತರ ಮೊಬೈಲ್​ ಸಂಖ್ಯೆಯಿಂದ ವರದಿ ಅದಲು ಬದಲಾಗಿದೆ ಎಂದು ತಿಳಿದಿದೆ. ಅಡ್ಮಿಟ್​ ಆಗಿದ್ದ ವ್ಯಕ್ತಿಗೆ ಸೋಂಕು ಇಲ್ಲ ಎಂದಾದರೆ ನಿಜವಾಗಿಯೂ ಸೋಂಕು ಇರುವ ವ್ಯಕ್ತಿ ಇದೀಗ ಎಲ್ಲಿಗೆ ಹೋಗಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಆತ ಇನ್ನೆಲ್ಲೆಲ್ಲಿ ತಿರುಗಿ, ಇನ್ಯಾರ್ಯಾರಿಗೆ ಸೋಂಕು ತಗುಲಿಸಿದ್ದಾನೋ ತಿಳಿಯುತ್ತಿಲ್ಲ ಎನ್ನಲಾಗಿದೆ.

ಈ ಎರಡೂ ಘಟನೆಗಳಿಂದ ಖಾಸಗಿ ಲ್ಯಾಬ್​ನ ಮೇಲೆ ತೀರಾ ಅನುಮಾನ ಶುರುವಾಗಿದೆ. ಈ ಪ್ರಯೋಗಾಲಯಗಳ ಕಾರ್ಯವೈಖರಿ ಬಗ್ಗೆಯೇ ಅನುಮಾನ ವ್ಯಕ್ತವಾಗುತ್ತಿದ್ದು, ಖಾಸಗಿ ಲ್ಯಾಬ್​ನ ಮಾನ್ಯತೆ ರದ್ದು ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.