Pregnant Trend : ಚೀನಾ ದೇಶವು ಪ್ರತಿ ವರ್ಷ ವಿಚಿತ್ರ ಟ್ರೆಂಡ್ಗಳಿಂದಲೇ ಸುದ್ದಿಯಾಗುತ್ತಿರುತ್ತದೆ. ಇಲ್ಲಿನ ಯುವ ಜನಾಂಗ ಹೊಸ ಹೊಸ ಟ್ರೆಂಡ್ ಸೃಷ್ಟಿ ಮಾಡಿ, ಜಗತ್ತಿನ ಗಮನ ಸೆಳೆಯುತ್ತಿದೆ. ಇತ್ತೀಚೆಗಷ್ಟೇ ಮತ್ತೊಂದು ಟ್ರೆಂಡ್ ಭಾರಿ ಸುದ್ದಿಯಲ್ಲಿದೆ. ಅದುವೇ 'ನಕಲಿ ಗರ್ಭಧಾರಣೆ' ಟ್ರೆಂಡ್.
ಅವಿವಾಹಿತ ಯುವತಿಯರು ಈ ಫೇಕ್ ಪ್ರೆಗ್ನೆನ್ಸಿ ಟ್ರೆಂಡ್ ಅನುಸರಿಸುತ್ತಿದ್ದಾರೆ. ಇದರ ಪ್ರಕಾರ ಮದುವೆಯಾಗದ ಯುವತಿಯರು ನಕಲಿ ಗರ್ಭಧರಿಸಿ ತಮ್ಮ ಫೋಟೋಗಳನ್ನು ತೆಗೆಯುವುದು ಮತ್ತು ಸಂಗ್ರಹಿಸುವುದಾಗಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಆದರೆ, ಈ ಹೊಸ ಟ್ರೆಂಡ್ ಚೀನಾದ ಸಾಂಪ್ರದಾಯಿಕ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ಟ್ರೆಂಡ್ ಚೀನಾದಲ್ಲಿ ಜನನ ಮತ್ತು ಮದುವೆ ಪ್ರಮಾಣದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಇದೆ.
ಮಹಿಳೆಯರು ಗರ್ಭಿಣಿಯಾದಾಗ ದೇಹವು ಬಹಳಷ್ಟು ಬದಲಾವಣೆಗಳಿಗೆ ಒಳಗಾಗುತ್ತದೆ. ತೂಕ ಹೆಚ್ಚಾಗುವುದು ಮಾತ್ರವಲ್ಲ, ಮುಖವೂ ಬದಲಾಗುತ್ತದೆ. ಅದಕ್ಕಾಗಿಯೇ ಚೀನಾದಲ್ಲಿ ಯುವತಿಯರು ತಮ್ಮ ಯೌವನದ ಆರಂಭದಲ್ಲೇ ಮೆಟರ್ನಿಟಿ ಶೂಟ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಫೋಟೋಶೂಟ್ ಮಾಡಿದರೆ ಹೆಚ್ಚು ಸುಂದರವಾಗಿ ಕಾಣುತ್ತೇವೆ ಎಂದು ಅನೇಕರು ಹೇಳಿಕೊಂಡಿದ್ದಾರೆ.
ಚೀನಾದ ಮಧ್ಯ ಪ್ರಾಂತ್ಯದ ಹುನಾನ್ ಮೂಲದ ಮೈಸಿ ಗೆಜ್ ಎಂಬ ಮಹಿಳೆ, ತನ್ನ ನಕಲಿ ಗರ್ಭಧಾರಣೆ ಪೋಟೋಗಳನ್ನು ಹಂಚಿಕೊಂಡಿದ್ದು ವಿಶ್ವದಾದ್ಯಂತ ಗಮನ ಸೆಳೆದಿದ್ದಾರೆ. ತೆಳ್ಳಗಿರುವಾಗ ಮತ್ತು ಯೌವನದ ಸಮಯದಲ್ಲಿ ಹೆಣ್ತನದ ಫೋಟೋಗಳನ್ನು ತೆಗೆದುಕೊಳ್ಳುವುದು ಒಂದು ಸ್ಮಾರ್ಟ್ ನಡೆ ಎಂದು ಮೈಸಿ ಗೆಜ್ ಹೇಳಿದ್ದಾರೆ. ಫೋಟೋಶೂಟ್ನಿಂದ ತುಂಬಾ ಖುಷಿಪಟ್ಟಿದ್ದೇನೆ ಮತ್ತು ನನ್ನ ಸ್ನೇಹಿತರು ಕೂಡ ಅದೇ ರೀತಿ ಫೋಟೋಶೂಟ್ ಮಾಡಿಸಿದ್ದಾರೆ ಎಂದು ಮೈಸಿ ಗೆಜ್ ಖುಷಿಪಟ್ಟರು.
ಇದನ್ನೂ ಓದಿ: ಕೊನೆಗೂ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ; ಫೆ. 23ಕ್ಕೆ ದುಬೈನಲ್ಲಿ ಭಾರತ-ಪಾಕ್ ಫೈಟ್
ಮೈಸಿ ಗೆಜ್ ಅವರು ಫೋಟೋಶೂಟ್‌ಗೆ ಸಿದ್ಧವಾಗುತ್ತಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ನಕಲಿ ಹೊಟ್ಟೆಯನ್ನು ಅವಳ ದೇಹದ ಮೇಲೆ ಹೇಗೆ ಇರಿಸಲಾಗಿದೆ ಎಂಬುದನ್ನು ವಿಡಿಯೋ ತೋರಿಸುತ್ತದೆ. ಇದಕ್ಕೆ ಕಾಮೆಂಟ್ ಮಾಡಿರುವ ಯುವತಿಯೊಬ್ಬಳು, ನಾನು ಕೂಡ ಸದ್ಯ ತೆಳ್ಳಗಿದ್ದೇನೆ. ಹಾಗಾಗಿ ಶೀಘ್ರದಲ್ಲೇ ಮೆಟರ್ನಿಟಿ ಶೂಟ್ ಮಾಡಬೇಕಾಗಿದೆ. ನಾನು ಈ ರೀತಿಯ ನಕಲಿ ಹೊಟ್ಟೆಯನ್ನು ಖರೀದಿಸುತ್ತೇನೆ ಎಂದು ಹೇಳಿದ್ದಾಳೆ.
ನನಗೀಗ 26 ವರ್ಷ. ನಾನಿನ್ನೂ ಒಂಟಿ ಮಹಿಳೆ. 23ನೇ ವಯಸ್ಸಿನಲ್ಲೇ ನಾನು ಮೆಟರ್ನಿಟಿ ಫೋಟೋಗಳನ್ನು ತೆಗೆದುಕೊಂಡಿದ್ದೇನೆ ಎಂದು ಮಹಿಳೆಯೊಬ್ಬಳು ಕಾಮೆಂಟ್ ಮಾಡಿದ್ದಾರೆ. 30 ವರ್ಷದ ಇನ್ನೊಬ್ಬ ಮಹಿಳೆ ಕೂಡ ಕಾಮೆಂಟ್ ಮಾಡಿದ್ದು, 22ನೇ ವಯಸ್ಸಿನಲ್ಲಿ ಮೆಟರ್ನಿಟಿ ಫೋಟೋಗಳನ್ನು ತೆಗೆದು ಸೇವ್ ಮಾಡಿದ್ದೇನೆ ಎಂದಿದ್ದಾರೆ.
ಈ ಟ್ರೆಂಡ್ ಸೌಂದರ್ಯದ ಅರ್ಥ ಅಥವಾ ಗ್ರಹಿಕೆಯ ಮೇಲೆ ನೆಗಿಟಿವ್ ಪ್ರಭಾವ ಬೀರುತ್ತದೆ ಎಂದು ವ್ಯಾಪಕವಾಗಿ ಟೀಕಿಸಲಾಗಿದೆ. ಈ ರೀತಿ ಮಾಡುವುದರಿಂದ ಗರ್ಭಿಣಿಯರಿಗೆ ತಮ್ಮ ನೋಟದ ಮೇಲೆ ಅಸಹ್ಯವನ್ನು ಉಂಟುಮಾಡುತ್ತದೆ. ಇಂತಹ ಫೋಟೋಗಳನ್ನು ಶೇರ್ ಮಾಡುವ ಮೂಲಕ ಗರ್ಭಿಣಿಯಾಗಿರುವಾಗಲೂ ತೆಳ್ಳಗಿರುವುದು ಚೆಂದ ಎಂದು ಎಲ್ಲರೂ ನಂಬುವಂತೆ ಮಾಡಿದ್ದಾರೆ. ಇದಲ್ಲದೆ, ಈ ಟ್ರೆಂಡ್ ಮಹಿಳೆಯರು ಗರ್ಭಿಣಿಯಾಗದಿರಲು ನಿರ್ಧರಿಸುವಂತೆ ಮಾಡುತ್ತದೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ನಕಲಿ ಗರ್ಭಧಾರಣೆ ಮಾತ್ರವಲ್ಲ, ಚೀನಾದಲ್ಲಿ ಇನ್ನೂ ಅನೇಕ ವಿಚಿತ್ರ ಟ್ರೆಂಡ್ಗಳಿವೆ. ದೇಹವನ್ನು ತೆಳ್ಳಗೆ ಮತ್ತು ಉದ್ದವಾಗಿ ಕಾಣಲು ಹೊಕ್ಕುಳ ಬಳಿ ಹಚ್ಚೆ ಹಾಕಿಸಿಕೊಳ್ಳುವುದು ಕೂಡ ಅಂತಹ ಟ್ರೆಂಡ್ಗಳಲ್ಲಿ ಒಂದು. ಚೀನಾದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಈ ರೀತಿಯ ಟ್ರೆಂಡ್‌ಗಳನ್ನು ತರುತ್ತಿದ್ದಾರೆ. ಅವರನ್ನು ಅನುಸರಿಸುವ ಲಕ್ಷಾಂತರ ಯುವ ಸಮುದಾಯ ಕೂಡ ಈ ರೀತಿಯ ಟ್ರೆಂಡ್‌ಗೆ ಅಡಿಕ್ಟ್ ಆಗಿದ್ದಾರೆ. ಈ ವಿಚಿತ್ರ ಟ್ರೆಂಡ್ಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಲಾಡುತ್ತಿದೆ. ಇವರನ್ನು ವಿರೋಧಿಸುವವರ ಸಂಖ್ಯೆ ಹೆಚ್ಚಿದ್ದರೂ ಬಹುತೇಕರು ಇನ್ಫ್ಲುಯೆನ್ಸರ್ಗಳ ಪರ ನಿಂತಿದ್ದಾರೆ. (ಏಜೆನ್ಸೀಸ್)