ಕೊಚ್ಚಿ: ಖಾಸಗಿ ಬಸ್ಸಿನಿಂದ ಕೆಳಗೆ ಬಿದ್ದು ಅದೇ ಬಸ್ ಮೇಲೆ ಹರಿದ ಪರಿಣಾಮ ಗರ್ಭಿಣಿ ನರ್ಸ್ ದುರಂತ ಸಾವಿಗೀಡಾಗಿರುವ ಘಟನೆ ಗುರುವಾರ ಕೇರಳದ ಅಲಪ್ಪುಝ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಶೆಲ್ಮಿ ಪೌಲೋಸ್ (33) ಎಂದು ಗುರುತಿಸಲಾಗಿದ್ದು, ಎರ್ನಾಕುಲಂ ಜಿಲ್ಲೆ ನೆತ್ತೂರ್ನಲ್ಲಿನ ಲೇಕೆಶೋರ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ಶೆಲ್ಮಿ ಈಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದು, ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದರು.
ಗುರುವಾರ ಬೆಳಗ್ಗೆ ಛಂಡಿರೋರ್ ಬಳಿಯ ಅರೂರ್ನಲ್ಲಿ ಅಪಘಾತ ಸಂಭವಿಸಿದೆ. ಕೆಲಸಕ್ಕೆಂದು ಶೆಲ್ಮಿ ಬಸ್ ಹತ್ತುವಾಗ ಹಿಂಬಂದಿಯಿಂದ ಟ್ರಕ್ ಒಂದು ಬಂದು ಬಸ್ಗೆ ಗುದ್ದಿದೆ. ಫುಟ್ಬೋರ್ಡ್ನಲ್ಲಿದ್ದ ಶೆಲ್ಮಿ ಕೆಳಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಬಸ್ ಆಕೆಯ ಮೇಲೆ ಹರಿದಿದೆ. ಗಂಭೀರ ಗಾಯಗಳಿಂದ ಅದೇ ದಿನ ಶೆಲ್ಮಿ ಮೃತಪಟ್ಟಿದ್ದಾರೆ.
ಶೆಲ್ಮಿಯನ್ನು ಆಕೆಯ ಪತಿ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅಪಘಾತ ಸಂಭವಿಸಿದೆ. ಪತಿಯ ಕಣ್ಣೆದುರಲ್ಲೇ ಶೆಲ್ಮಿ ಕೊನೆಯುಸಿರೆಳೆದಿದ್ದಾರೆ. ವಯನಾಡು ಮೂಲದವರಾದ ಶೆಲ್ಮಿ ಹಲವು ವರ್ಷಗಳಿಂದ ಲಕೆಶೋರ್ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಛಂಡಿರೋರ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಪೊಲೀಸರು ಅಸ್ವಾಭವಿಕ ಸಾವು ಪ್ರಕರಣ ದಾಖಲಿಸಿದ್ದು, ಬಸ್ಗೆ ಗುದ್ದಿದ ಟ್ರಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಈವರೆಗೂ ಯಾರನ್ನೂ ಬಂಧಿಸಿಲ್ಲ. ಇದರ ನಡುವೆ ಟ್ರಕ್ ಡ್ರೈವರ್ ನಾಪತ್ತೆಯಾಗಿದ್ದಾನೆ. (ಏಜೆನ್ಸೀಸ್)