ನ್ಯೂಸ್

ಬಿಜೆಪಿಯ ದೊಡ್ಡ ದೊಡ್ಡ ನಾಯಕರಿಗಿಂತಲೂ ನಾನೇ ಸೀನಿಯರ್: ಪ್ರತಾಪ್​ ಸಿಂಹ

ಮೈಸೂರು: ಮುಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್​ ನಾಯಕರು ಜಂಟಿಯಾಗಿ ನಡೆಸಿದ ಪಾದಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಇದೀಗ ವಾಲ್ಮೀಕಿ ನಿಗಮದ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ ದೋಸ್ತಿ ಪಾಳಯ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಯೋಜನೆ ರೂಪಿಸುತ್ತಿದೆ. ಇದರ ನಡುವೆಯೇ ಬಿಜೆಪಿ ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್​ ಬೆಳಗಾವಿಯ ರೆಸಾರ್ಟ್​ ಒಂದರಲ್ಲಿ ಬಿಜೆಪಿ ಅತೃಪ್ತ ನಾಯಕರ ಸಭೆ ನಡೆಸಿದ್ದರು. ಈ ವಿಚಾರ ಬಿಜೆಪಿ ಪಾಳಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿತ್ತು.

ಅತೃಪ್ತ ನಾಯಕರ ಸಭೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮಾಜಿ ಸಂಸದ ಪ್ರತಾಪ್​ ಸಿಂಹ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಈ ಕುರಿತು ಮಾತನಾಡಿರುವ ಮಾಜಿ ಸಂಸದ ಪ್ರತಾಪ್​ ಸಿಂಹ ಯತ್ನಾಳ್ ಅವರಂಥ ದೊಡ್ಡ ನಾಯಕ ಕರೆದ ಕಾರಣ ನಾನು ಹೋಗಿದ್ದೆ ಎಂದು ಹೇಳುವ ಮೂಲಕ ಉಹಾಪೋಹಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.

ಮೈಸೂರು ಚಲೋ ಪಾದಯಾತ್ರೆಯ ಅನುಭವವನ್ನು ನಾನು ಅಲ್ಲಿ ಹಂಚಿಕೊಂಡೆ. ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತದೆ. ಯತ್ನಾಳ್ ಅವರಂಥ ದೊಡ್ಡ ನಾಯಕ ಕರೆದ ಕಾರಣ ನಾನು ಹೋಗಿದ್ದೆ. ನಮ್ಮ ಪಾದಯಾತ್ರೆ ಯಾರ ಮೇಲಾಟದ ಕಾರ್ಯಕ್ರಮವಲ್ಲ. ಯಾರ ನಾಯಕತ್ವ ಪ್ರದರ್ಶನವೂ ಅಲ್ಲ. ಅದಕ್ಕೆ ಹೈಕಮಾಂಡ್ ಅನುಮತಿ ಕೊಡುತ್ತದೆ. ವರಿಷ್ಠರ ಅನುಮತಿಯೊಂದಿಗೇ ನಡೆಸುತ್ತೇವೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಎಲ್ಲರನ್ನೂ ಆಹ್ವಾನಿಸುತ್ತಾರೆ ಎಂಬ ವಿಶ್ವಾಸವಿದೆ.

ಕೇಂದ್ರಕ್ಕೆ ಹೋಗಬೇಡಿ‌ ರಾಜ್ಯದಲ್ಲೇ ಇರಿ ಎಂಬ ಸಂದೇಶ ವರಿಷ್ಠರಿಂದ ಸಿಕ್ಕಿದೆ. ಹೀಗಾಗಿ ಇಲ್ಲೇ ಇದ್ದೇನೆ. ನಾನು ಅನ್ಯಾಯದ ವಿರುದ್ಧ ಮಾತ್ರವೇ ರೆಬಲ್‌; ಪಕ್ಷದ ವಿರುದ್ಧವಲ್ಲ. ಬಿಜೆಪಿಯ ದೊಡ್ಡ ದೊಡ್ಡ ನಾಯಕರಿಗಿಂತಲೂ ನಾನು ಸೀನಿಯರ್. ಏಕೆಂದರೆ, ನನ್ನಪ್ಪ ಆರ್‌ಎಸ್ಎಸ್‌ನಲ್ಲಿದ್ದರು. ನಾನು ಪಕ್ಷದ ಕಾರ್ಯಕ್ರಮಗಳಲ್ಲಿ ಬ್ಯಾನರ್, ಬಂಟಿಂಗ್ ಕಟ್ಟಿಲ್ಲದಿರಬಹುದು. ಆದರೆ, ಯುವಜನರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇನೆ. ಬಿ.ಎಸ್. ಯಡಿಯೂರಪ್ಪ ಅಂಥವರು ನೇಪಥ್ಯಕ್ಕೆ ಸರಿಯುತ್ತಿರುವ ಕಾರಣ ಪಕ್ಷಕ್ಕೆ ನನ್ನಂತಹ ಯಂಗ್ ಬ್ಲಡ್ ಬರಬೇಕಿದೆ. ಹೀಗಾಗಿ ನನ್ನನ್ನು ರಾಜ್ಯದಲ್ಲೇ ಉಳಿಸಿದ್ದಾರೆ.

ನಾನು ಯಾರನ್ನೋ ಓಲೈಸಲು ಅಥವಾ ಮೆಚ್ಚಿಸಲು ರಾಜಕಾರಣ ಮಾಡುವುದಿಲ್ಲ. ಯಾರ ಮನೆಯ ಬಾಗಿಲನ್ನೂ ತಟ್ಟುವುದಿಲ್ಲ. ನನಗೆ ಟಿಕೆಟ್ ಕೊಟ್ಟಿದ್ದು ಬಿಜೆಪಿ ಅಲ್ಲ ಆರ್‌ಎಸ್‌ಎಸ್‌ ನೀಡಿತ್ತು. ಕ್ಷೇತ್ರ, ಜಾತಿಯಿಂದಾಚೆ ಜನಪ್ರಿಯತೆಯುಳ್ಳ ಯತ್ನಾಳ್ ಅಂಥವರಲ್ಲಿ ನಾನೂ ಒಬ್ಬ. ಈ ಬಗ್ಗೆ ಯಾರಿಗಾದರೂ ಅನುಮಾನ ಇದೆಯೇ? ಮೈಸೂರು ನೆಲೆ ಹಾಗೂ ಪ್ರೀತಿ ಕೊಟ್ಟಿದೆ. ಆದ್ದರಿಂದ ಮೈಸೂರಿನಲ್ಲೇ ಇರುತ್ತೇನೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದ್ದಾರೆ.