ನ್ಯೂಸ್

ಕಾಂಗ್ರೆಸ್-ಬಿಜೆಪಿ ನಾಯಕರ ಹೊಂದಾಣಿಕೆ! ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು ಕೊಟ್ಟ ಸಿಎಂ

ಬೆಂಗಳೂರು: ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದು, 'ಆತನಿಗೆ ರಾಜಕೀಯ ಪಕ್ವತೆ ಇಲ್ಲ. ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಾನೆ' ಎಂದು ಹೇಳಿದ್ದಾರೆ.

'ಬಿಜೆಪಿಯ ಕೆಲ ಮಹಾನ್ ನಾಯಕರು ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಹಾಗಾಗಿ ಹಗರಣಗಳ ತನಿಖೆ ನಡೆಸುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಸಿದ್ದರಾಮಯ್ಯ ವಿರುದ್ಧ ರೀಡೂ, ಅರ್ಕಾವತಿ ಡಿನೋಟಿಫೀಕೇಷನ್, ಕೆಂಪಣ್ಣ ಆಯೋಗ ವರದಿ ಇದೆ ಎಂದು ನಮ್ಮ ಹಿರಿಯ ನಾಯಕರು ಅಬ್ಬರಿಸುತ್ತಿದ್ದರು. ಆದರೆ ಈ ಬಗ್ಗೆ ವಿಧಾನಸಭೆ ಹೊರಗೂ-ಒಳಗೂ ಸಮರ್ಥವಾಗಿ ಮಂಡನೆ ಮಾಡಲಿಲ್ಲ' ಎಂದು ಸ್ವಪಕ್ಷದ ವಿರುದ್ಧವೇ ಮೈಸೂರಿನಲ್ಲಿ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಸಂಸದ ಪ್ರತಾಪ್ ಸಿಂಹ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಯಾರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಬೇಕು. ಯಾರು ಎಂದು ಅವರಿಗೆ ಗೊತ್ತಿರಬೇಕಲ್ಲ, ಮಾಹಿತಿ ಇದ್ದರೆ ಹೇಳಲಿ.
ರಾಜ್ಯಪಾಲರಿಗೆ ದೂರು ಕೊಡುವುದಾದರೆ ಕೊಡಲಿ ಎಂದ ಮುಖ್ಯಮಂತ್ರಿಗಳು ಪೇ ಸಿಎಂ ಕುರಿತು ತನಿಖೆ ಮಾಡಿಸಲು ಹೇಳಿರಲಿಲ್ಲ. ತನಿಖೆಯನ್ನು ಯಾವಾಗ, ಯಾರಿಂದ ಎಷ್ಟು ಹೊತ್ತಿಗೆ ಮಾಡಿಸಬೇಕು ಎನ್ನುವುದು ನಮಗೆ ಸೇರಿದ್ದು ಎಂದರು.

ಪ್ರತಾಪ್ ಸಿಂಹ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಬೆಂಗಳೂರು ರಸ್ತೆ ತಾವೇ ಮಾಡಿಸಿದ್ದು ಎನ್ನುತ್ತಾರೆ. ಅವರು ಬೆಂಗಳೂರು ರಸ್ತೆಗೆ ಸಂಸದರೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ನನ್ನ ರಾಜಕೀಯ ಜೀವನದಲ್ಲಿ ವಿರೋಧ ಪಕ್ಷದವರೊಂದಿಗೆ ಮಾತೂ ಆಡುವುದಿಲ್ಲ. ಅಧಿಕಾರದಲ್ಲಿದ್ದಾಗ ಅವರ ಮನೆಗೂ ಹೋಗುವುದಿಲ್ಲ. ಅವರು ಬಂದರೆ ಸೌಜನ್ಯಕ್ಕಾಗಿ ಮಾತನಾಡುತ್ತೇನೆ. ಆದರೆ ರಾಜಕೀಯ ಮಾತನಾಡುವುದಿಲ್ಲ ಎಂದರು.