ನವದಹೆಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ(Pranab Mukherjee's Daughter) ಶರ್ಮಿಷ್ಠಾ ಮುಖರ್ಜಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಕೆಲವೇ ದಿನಗಳ ನಂತರ ರಾಹುಲ್ ಗಾಂಧಿ ವಿಯೆಟ್ನಾಂಗೆ ಭೇಟಿ ನೀಡಿರುವ ಬಗ್ಗೆ ಆರೋಪ ಮಾಡಿದ್ದಾರೆ.
ಇದನ್ನು ಓದಿ: ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಣೆ; ಬಾಂಗ್ಲಾದ ಹಸ್ತಾಂತರ ಬೇಡಿಕೆ ಬೆನ್ನಲ್ಲೆ ಭಾರತದ ಮಹತ್ತರ ನಿರ್ಧಾರ | Sheikh Hasina
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶರ್ಮಿಷ್ಠಾ, ಸಾಮಾನ್ಯ ಮತ್ತು ಕಾಳಜಿಯುಳ್ಳ ನಾಗರಿಕಳಾಗಿ ನಾನು ರಾಹುಲ್ ಗಾಂಧಿಯನ್ನು ಪ್ರಶ್ನಿಸಲು ಬಯಸುತ್ತೇನೆ. ತನ್ನದೇ ಪಕ್ಷದ ಮಹಾನ್ ನಾಯಕರಾಗಿದ್ದ ಮಾಜಿ ಪ್ರಧಾನಿ ಅವರ ನಿಧನದಿಂದಾಗಿ ದೇಶವು ಶೋಕದಲ್ಲಿರುವಾಗ ಅವರು ಏಕೆ ಹೀಗೆ ಮಾಡಿದರು. ಹೊಸ ವರ್ಷವನ್ನು ಆಚರಿಸಲು ನೀವು ವಿದೇಶಕ್ಕೆ ಹೋಗುತ್ತೀರಾ? ಎಂದು ಕೇಳಲು ಬಯಸುತ್ತೇನೆ.
ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯ ನಂತರ ಅವರ ಚಿತಾಭಸ್ಮವನ್ನು ಸಂಗ್ರಹಿಸುವ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಎಲ್ಲಿದ್ದರು. ಮಾಜಿ ಪ್ರಧಾನಿಯವರ ಕುಟುಂಬದ ಜತೆ ಪಕ್ಷ ಗಟ್ಟಿಯಾಗಿ ನಿಲ್ಲಬೇಕಾದ ಸಂದರ್ಭವಿದು ಎಂದು ಹೇಳಿದರು. ನನ್ನ ತಂದೆ ನಿಧನರಾದಾಗ ಪಕ್ಷದ ನಾಯಕರಿಂದ ವೈಯಕ್ತಿಕವಾಗಿ ಸಂತಾಪ ಸಂದೇಶಗಳು ಬಂದಿದ್ದವು. ನಂತರ ಯಾರೂ ಬರದಿರುವುದು ಸೂಕ್ತ, ಏಕೆಂದರೆ ಆ ಸಮಯದಲ್ಲಿ ಕೋವಿಡ್ -19 ಸಾಂಕ್ರಾಮಿಕವಾಗಿತ್ತು. ಆದರೆ ಈಗ ಕೋವಿಡ್ ಇಲ್ಲ, ಯಾವುದೇ ನಿರ್ಬಂಧಗಳಿಲ್ಲ, ಅಸ್ಥಿಸಂಗ್ರಹದ ಸಮಯದಲ್ಲಿ ಕಾಂಗ್ರೆಸ್ ನಾಯಕ ಏಕೆ ಇರಲಿಲ್ಲ? ಎಂದು ಕೇಳಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಕೆಲವು ದಿನದ ನಂತರ ರಾಹುಲ್ ಗಾಂಧಿ ಅವರು ವಿಯೆಟ್ನಾಂಗೆ ಭೇಟಿ ನೀಡಿ ಹಿರಿಯ ಕಾಂಗ್ರೆಸ್ ನಾಯಕರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಕಳೆದ ವಾರ ಈ ವಿವಾದ ಭುಗಿಲೆದ್ದಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ದೇಶ ಶೋಕದಲ್ಲಿರುವಾಗ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿ ಹೊಸ ವರ್ಷವನ್ನು ಸ್ವಾಗತಿಸಿದರು. ದೇಶವು ಏಳು ದಿನಗಳ ಶೋಕದಲ್ಲಿದೆ. ಕಾಂಗ್ರೆಸ್ ನಾಯಕನಿಗೆ ಆ ಚಿಂತೆಯೇ ಇಲ್ಲ. ಪಕ್ಷವು ಅವರನ್ನು ಜೀವನದುದ್ದಕ್ಕೂ ಅವಮಾನಿಸಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಹೇಳಿದರು.
ಈ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ. ಅವರ ವೈಯಕ್ತಿಕ ಗೌಪ್ಯತೆಯನ್ನು ಗೌರವಿಸಲು ಕುಟುಂಬದೊಂದಿಗೆ ಸಮಾಲೋಚಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕುಟುಂಬದವರ ಆಶಯಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷ ಸ್ಪಷ್ಟಪಡಿಸಿತು.(ಏಜೆನ್ಸೀಸ್)