ನ್ಯೂಸ್

ಡಿ.30, 31ರಂದು ರಾಜ್ಯಾದ್ಯಂತ ಬಾರ್​ಗಳು ಬಂದ್​ ಆಗಬೇಕು: ಪ್ರಮೋದ್ ಮುತಾಲಿಕ್ ಆಗ್ರಹ | New Year

New Year: ಇನ್ನೇನು 2025ರ ಹೊಸ ವರ್ಷಾಚರಣೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು, ಭರ್ಜರಿ ಸಂಭ್ರಮ, ಸಡಗರದಿಂದ ನೂತನ ಕ್ಯಾಲೆಂಡರ್ ತೆರೆಯಲು ಜನರು ಸಿದ್ಧರಾಗಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿಯೂ ಪಾರ್ಟಿ, ಸಂಭ್ರಮಗಳು ಜೋರಾಗಿರಲಿದೆ. ಈಗಾಗಲೇ ಹೊಸ ವರ್ಷದ ಸಂಭ್ರಮಕ್ಕೆ ಹಲವರು ಹೋಟೆಲ್, ರೆಸಾರ್ಟ್​ಗಳನ್ನು ಬುಕ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮದ್ಯದ ಕಿಕ್ ಹೆಚ್ಚಿರಲಿದ್ದು, ಮದ್ಯಪಾನ ಸರಬರಾಜು ಮಾಡುವ ಬಾರ್​ಗಳಲ್ಲಿ ಜನರ ಹಾವಳಿ ಹೆಚ್ಚಾಗಿರಲಿದೆ. ಈ ವಿಷಯವನ್ನು ಉಲ್ಲೇಖಿಸಿ ಮಾತನಾಡಿರುವ ​ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಡಿ.30 ಹಾಗೂ 31ರಂದು ರಾಜ್ಯಾದ್ಯಂತ ಬಾರ್​ಗಳನ್ನು ಮುಚ್ಚಬೇಕು ಎಂದಿದ್ದಾರೆ.

ಯುಗಾದಿಯೇ ಹೊಸ ವರುಷ

ಈ ಕುರಿತು ಇಂದು (ಡಿ.28) ಬಾಗಲಕೋಟೆಯಲ್ಲಿ ಮಾತನಾಡಿದ ಮುತಾಲಿಕ್, "ಈ ಹಿಂದಿನಿಂದಲೂ ಶ್ರೀರಾಮಸೇನೆ ಹೊಸ ವರ್ಷಾಚರಣೆಗೆ ವಿರೋಧ ಮಾಡುತ್ತಲೇ ಬಂದಿದೆ. ಹಿಂದು ಸಂಸ್ಕೃತಿ ಪ್ರಕಾರ, ನಮಗೆ ಯುಗಾದಿ ಹೊಸ ವರ್ಷ. ವೈಜ್ಞಾನಿಕ ಹಾಗೂ ಪಂಚಾಂಗದ ಪ್ರಕಾರ ಯುಗಾದಿಯೇ ನೂತನ ವರುಷ. ಬ್ರಿಟಿಷರು, ಕ್ರಿಶ್ಚನ್ ಪರಂಪರೆ ಇನ್ನು ಜನವರಿ 1 ಹೊಸ ವರ್ಷ ಎನ್ನುವುದು ಅವೈಜ್ಞಾನಿಕ. ಇದನ್ನು ನಿಲ್ಲಿಸಬೇಕು" ಎಂದರು.

7 ದಿ‌ನ ಶೋಕಾಚರಣೆ

"ಡಿ.31ರ ರಾತ್ರಿಯಂದು ಕುಡಿದು ಕುಪ್ಪಳಸಿ, ಡ್ರಗ್ಸ್, ರೇಪ್, ಹೊಡೆದಾಟ, ಅಶ್ಲೀಲ ಅಸಭ್ಯವಾಗಿ ಮಾಡುವುದು ನಿಲ್ಲಿಸಬೇಕು. ಇದರ ವಿರುದ್ದ ಹೋರಾಟ ಮಾಡುತ್ತೇವೆ. ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ಅವರ ನಿಧನದ ಹಿನ್ನಲೆ ಡಿ. 26ರಿಂದ ಜ. 1ರವರೆಗೆ ಏಳು ದಿ‌ನ ಶೋಕಾಚರಣೆ ಇದೆ. ಶೋಕಾಚರಣೆ ವೇಳೆ ಹೇಗೆ ಹೊಸ ವರ್ಷಾಚರಣೆ ಮಾಡ್ತೀರಿ? ಸರ್ಕಾರ ಈ ಕೂಡಲೇ ಇದನ್ನು ತಡೆಯಬೇಕು. ಇಲ್ಲವಾದರೆ ಹಿಂದು ಸಂಘಟಕರು ಹೋಟೆಲ್​ಗೆ ನುಗ್ಗಿ ಹೊಡೆಯಬೇಕಾಗುತ್ತದೆ" ಎಂದು ಎಚ್ಚರಿಸಿದರು.

ಮೈಸೂರಲ್ಲಿ ಹೊಸ ವರ್ಷಾಚರಣೆ ಸಂಭ್ರಮ ರದ್ದು

"ಇದು ಯುವಕರನ್ನ ಹಾಳು ಮಾಡುವ ಪದ್ಧತಿ. ಡ್ರಗ್ ಮಾಫಿಯಾದಲ್ಲಿ ಸಿಕ್ಕಿಸಿ ಅವರ ಜೀವನ ಹಾಳು ಮಾಡುವ ಈ ಆಚರಣೆ ಬಿಡಬೇಕು. ಡಿ. 31ರ ರಾತ್ರಿ ಎಲ್ಲೆಲ್ಲಿ ಆಚರಣೆ ಮಾಡ್ತಾರೆ. ಅಲ್ಲೆಲ್ಲ ಹೋರಾಟ ಮಾಡುತ್ತೇವೆ. ಮೈಸೂರಲ್ಲಿ ಈಗಾಗಲೇ ಹೊಸ ವರ್ಷಾಚರಣೆ ರದ್ದು ಮಾಡಿದ್ದಾರೆ. ಇದು ಇಡೀ ರಾಜ್ಯಾದ್ಯಂತ ಆಗಬೇಕು. ಡಿ. 30 ಹಾಗೂ 31ರಂದು ಬಾರ್​ಗಳು ಬಂದ್ ಆಗಬೇಕು. ಈ ಬಾರ್​ಗಳಿಂದಲೇ ಕುಡಿತ, ಕುಣಿತ, ಅಶ್ಲೀಲ, ಅಸಭ್ಯ ಉಂಟಾಗ್ತಿದೆ" ಎಂದು ಕಿಡಿಕಾರಿದರು.