ನ್ಯೂಸ್

ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಜ್ಜಾದ ಪ್ರಮೋದ್ ಮುತಾಲಿಕ್

ಕಾರ್ಕಳ: ಮುಂದಿನ ವಿಧಾಸಭಾ ಚುನಾವಣೆಯಲ್ಲಿ ಹಿಂದುತ್ವಕ್ಕಾಗಿ ಸ್ಪರ್ಧಿಸಲಿದ್ದೇನೆ ಎಂದು ಹೇಳಿದ್ದ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಬಹಿರಂಗ ಪಡಿಸಿರಲಿಲ್ಲ. ಪರೋಕ್ಷವಾಗಿ ಉಡುಪಿ ಜಿಲ್ಲೆಯ ಕಾರ್ಕಳದಿಂದ ಚುನಾವಣೆ ಎದುರಿಸುವುದಾಗಿ ಗುಟ್ಟು ಬಿಟ್ಟುಕೊಟ್ಟಿದ್ದರು. ಇದೀಗ ತಾನು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಮುತಾಲಿಕ್ ಘೋಷಣೆ ಮಾಡಿದ್ದಾರೆ.

ಸಾವಿರಾರು ಕಾರ್ಯಕರ್ತರ ಒತ್ತಡದಿಂದ ಹಾಗೂ ನೋವಿನ ಧನಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ. ಏಳೆಂಟು ಬಾರಿ ಕ್ಷೇತ್ರವನ್ನು ಸುತ್ತಾಡಿದ್ದೇನೆ. ಇಲ್ಲಿನ ಜನರು ನನ್ನನ್ನು ಬೆಂಬಲಿಸಿದ್ದಾರೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಅನೇಕ ಘಟನೆಗಳಿಂದ ಹಿಂದುಗಳಿಗೆ ನೋವಾಗಿದೆ. ಹಿಂದುತ್ವ ಮತ್ತು ಭ್ರಷ್ಟಾಚಾರ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಮುತಾಲಿಕ್ ಹೇಳಿದರು.

ನಾನು ಬಿಜೆಪಿ ಹಾಗೂ ಬಿಜೆಪಿ ಸಿದ್ಧಾಂತದ ವಿರೋಧಿ ಅಲ್ಲ. ಬಿಜೆಪಿಯೊಳಗಿನ ಕೆಲ ವ್ಯಕ್ತಿಗಳು ಹಾಗೂ ತತ್ವ ಸಿದ್ಧಾಂತ ವಿರುದ್ಧ ನನ್ನ ಹೋರಾಟವಿದೆ. ಅಂದು ಬಿಜೆಪಿ ಮಾಡಿದ ಅವಮಾನವನ್ನು ಎಂದಿಗೂ ಮರೆಯುವುದಿಲ್ಲ. ಹಿಂದುತ್ವ, ಪ್ರಾಮಾಣಿಕತೆ ಇದ್ದರೆ ಬಿಜೆಪಿ ನನಗೆ ಕಾರ್ಕಳದಲ್ಲಿ ಬೆಂಬಲ ಕೊಡಬೇಕು ಎಂದರು.

ಪ್ರಸ್ತುತ ಇಂಧನ ಸಚಿವರಾಗಿರುವ ಸುನಿಲ್ ಕುಮಾರ್ ಅವರ ಕ್ಷೇತ್ರ ಕಾರ್ಕಳ. ಇದೀಗ ಮುತಾಲಿಕ್ ಅಲ್ಲೇ ಸ್ಪರ್ಧೆ ಮಾಡಲು ನಿರ್ಧರಿಸಿರುವುದರಿಂದ ಈ ಬಾರಿಯ ಕಾರ್ಕಳ ವಿಧಾನಸಭಾ ಚುನಾವಣಾ ಕಣದಲ್ಲಿ ಪ್ರಬಲ ಸ್ಪರ್ಧೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಮುತಾಲಿಕ್ ಸ್ಪರ್ಧೆ ಸದ್ಯ ಬಿಜೆಪಿ ಪಾಳಯದಲ್ಲಿ ಚರ್ಚೆಯಾಗುತ್ತಿದ್ದು, ಹಿಂದುತ್ವದ ಆಧಾರದಲ್ಲಿ ಲಭಿಸುತ್ತಿದ್ದ ಮತಗಳಲ್ಲಿ ಏರಪೇರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.