ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಇತ್ತೀಚೆಗೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಆಗೊಂದು, ಈಗೊಂದು ಹೇಳಿಕೆ ನೀಡಿ, ವಿವಾದ ಸೃಷ್ಟಿಸುತ್ತಿದ್ದ ಅವರು ಏಕಾಏಕಿ ಮೌನವಾಗಿದ್ದಾರೆ.
ಇತ್ತೀಚೆಗೆ ಭೋಪಾಲ್ ಲೋಕಸಭಾ ಕ್ಷೇತ್ರದ ಜನರಂತೂ ಪ್ರಜ್ಞಾ ಸಿಂಗ್ ಠಾಕೂರ್ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ಗಳನ್ನೂ ಹಾಕಲು ಪ್ರಾರಂಭಿಸಿದ್ದರು. ನಮ್ಮ ಸಂಸದೆ ಕಾಣೆಯಾಗಿದ್ದಾರೆ..ಹುಡುಕಿಕೊಡಿ ಎಂಬಂಥ ವಿವಿಧ ಪೋಸ್ಟರ್ಗಳನ್ನು ಭೋಪಾಲ್ನ ವಿವಿಧ ಭಾಗಗಳಲ್ಲಿ ಹಾಕಲಾಗಿತ್ತು. ಕರೊನಾ ಇಷ್ಟೊಂದು ತಾಂಡವ ಆಡುತ್ತಿದ್ದರೂ ಸಂಸದರು ಎಲ್ಲಿ ಎಂಬಂತಹ ವ್ಯಂಗ್ಯಭರಿತ ಬರಹಗಳು ಅದರಲ್ಲಿ ಇದ್ದವು.
ಭೋಪಾಲ್ನ ಭೈರಾಗಡ್ ಚಿಚ್ಲಿ ಪ್ರದೇಶದಲ್ಲಿ ಶಂಕರ್ ಭಾರತಿಯಿಂದ ಪ್ರಾರಂಭಿಸಲಾದ ಸಂಚಾರಿ ಆಸ್ಪತ್ರೆಯನ್ನು ವಿಡಿಯೋ ಕಾಲ್ ಮೂಲಕವೇ ಸಾಧ್ವಿ ಪ್ರಜ್ಞಾ ಉದ್ಘಾಟಿಸಿದ್ದರು. ಆದರೂ ಅವರು ಹೊರಗೆ ಯಾಕೆ ಬರುತ್ತಿಲ್ಲ ಎಂಬುದು ಬಹುದೊಡ್ಡ ಚರ್ಚೆಯ ವಿಷಯವಾಗಿತ್ತು.
ಹೀಗೆ ಮಿಸ್ಸಿಂಗ್ ಪೊಸ್ಟರ್ಗಳು ಕಾಣಿಸಿಕೊಳ್ಳುತ್ತಿದ್ದಂತೆ ಬಿಜೆಪಿ ವಕ್ತಾರ ಪ್ರಜ್ಞಾ ಸಿಂಗ್ ಎಲ್ಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಸಾಧ್ವಿ ಪ್ರಜ್ಞಾ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಕ್ಯಾನ್ಸರ್ ಮತ್ತು ಕಣ್ಣಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆದರೆ ಅವರು ಮೊಬೈಲ್ ಮೂಲಕವೇ ಕೆಲಸ ಮಾಡುತ್ತಿದ್ದಾರೆ. ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿ ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾಗಿರುವವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ವಕ್ತಾರ ರಾಹುಲ್ ಕೊಠಾರಿ ಹಾಗೂ ಶಂಕರ ಭಾರತಿ ಸಂಘಟನೆ ಮುಖ್ಯಸ್ಥ ಉಮಾಕಾಂತ್ ದೀಕ್ಷಿತ್ ತಿಳಿಸಿದ್ದಾರೆ. (ಏಜೆನ್ಸೀಸ್)