ನ್ಯೂಸ್

ಪನ್ನುನ್ ಹತ್ಯೆಗೆ ಸಂಚು ಪ್ರಕರಣ.. ನಿಖಿಲ್ ಗುಪ್ತಾ ಹಸ್ತಾಂತರಕ್ಕೆ ಜೆಕ್ ರಿಪಬ್ಲಿಕ್ ಕೋರ್ಟ್ ಅನುಮತಿ

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಅಮೆರಿಕಾಗೆ ಭಾರತೀಯ ಮೂಲದ ನಿಖಿಲ್ ಗುಪ್ತಾ(52)ನನ್ನು ಹಸ್ತಾಂತರಿಸಲು ಜೆಕ್ ನ್ಯಾಯಾಲಯ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಜೂನ್‍ನಲ್ಲಿ ಪ್ರೇಗ್‍ನಲ್ಲಿ ಜೆಕ್ ಅಧಿಕಾರಿಗಳಿಂದ ಬಂಧನಕ್ಕೊಳಗಾದ ಗುಪ್ತಾ ಅಮೆರಿಕಾ ಮತ್ತು ಕೆನಡಾದ ಪೌರತ್ವ ಹೊಂದಿರುವ ಸಿಖ್ ಪ್ರತ್ಯೇಕತಾವಾದಿ ಪನ್ನುನ್ ನನ್ನು ಕೊಲ್ಲುವ ಯೋಜನೆಯಲ್ಲಿ ಭಾರತೀಯ ಸರ್ಕಾರಿ ಅಧಿಕಾರಿಯೊಂದಿಗೆ ಸಹಕರಿಸಿದ್ದಾರೆ ಎಂದು ಯುಎಸ್ ಫೆಡರಲ್ ಪ್ರಾಸಿಕ್ಯೂಟರ್​ಗಳು ಆರೋಪಿಸಿದ್ದಾರೆ.

ಜೆಕ್ ಮಾಧ್ಯಮಗಳ ಪ್ರಕಾರ, ತಪ್ಪಾದ ಗುರುತಿನ ಪ್ರಕರಣ ಇದಾಗಿದ್ದು, ಯುನೈಟೆಡ್ ಸ್ಟೇಟ್ಸ್​ ಹುಡುಕುತ್ತಿರುವ ವ್ಯಕ್ತಿ ನಾನಲ್ಲ ಎಂದು ಗುಪ್ತಾ ನ್ಯಾಯಾಲಯದಲ್ಲಿ ವಾದಿಸಿದ್ದರು. ಅವರು ಪ್ರಕರಣವನ್ನು ರಾಜಕೀಯ ಸ್ವರೂಪದಲ್ಲಿ ನಿರೂಪಿಸಿದರು, ಸುದೀರ್ಘ ಕಾನೂನು ಹೋರಾಟಕ್ಕೆ ವೇದಿಕೆಯನ್ನು ಸಿದ್ಧಪಡಿಸಿದ್ದರು. ಸಚಿವರ ನಿರ್ಧಾರದ ಸಮಯದ ಚೌಕಟ್ಟನ್ನು ಈ ಹಂತದಲ್ಲಿ ಊಹಿಸಲಾಗುವುದಿಲ್ಲ ಎಂದು ಜೆಕ್ ನ್ಯಾಯ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಕೆಳ ನ್ಯಾಯಾಲಯದ ನಿರ್ಧಾರಗಳ ಬಗ್ಗೆ ಯಾವುದೇ ಸಂದೇಹಗಳು ಉದ್ಭವಿಸಿದರೆ ಜೆಕ್ ಸುಪ್ರೀಂ ಕೋರ್ಟ್‍ನ ಅಭಿಪ್ರಾಯವನ್ನು ಪಡೆಯಲು ನ್ಯಾಯ ಸಚಿವರು ಮೂರು ತಿಂಗಳ ಕಾಲಾವಕಾಶವನ್ನು ಹೊಂದಿದ್ದಾರೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಪ್ರೇಗ್ ಹೈಕೋರ್ಟ್ ಈ ಹಿಂದೆ ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಗುಪ್ತಾ ಅವರ ಮನವಿಯನ್ನು ವಜಾಗೊಳಿಸಿತ್ತು, ಅದು ಹಸ್ತಾಂತರಕ್ಕೆ ಅನುಮತಿ ಇದೆ ಎಂದು ತೀರ್ಪು ನೀಡಿತು.

ಜೆಕ್ ರಿಪಬ್ಲಿಕ್ ಐತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕಾದ ಹಸ್ತಾಂತರ ವಿನಂತಿಗಳನ್ನು ಅನುಮತಿಸಿದೆ. ಗುಪ್ತಾ ಅವರ ವಕೀಲರು ಹಸ್ತಾಂತರಕ್ಕೆ ಅಧಿಕಾರ ನೀಡದಂತೆ ಜೆಕ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.