ನ್ಯೂಸ್

ರೀ-ರಿಲೀಸ್ ಆಗಲಿದೆ 'ಡಾರ್ಲಿಂಗ್​'! ಪ್ರಭಾಸ್​-ಕಾಜಲ್ ಅಭಿನಯದ ಬ್ಲಾಕ್​ಬಸ್ಟರ್​ ಚಿತ್ರಕ್ಕೆ ಫ್ಯಾನ್ಸ್​ ಕಾತರ, ಇಲ್ಲಿದೆ ವಿವರ

ಮೋಹನ್​ ಶೆಟ್ಟಿ

ಹೈದರಾಬಾದ್: ಜೂ. 27ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿಗಳಲ್ಲಿ ಬಿಡುಗಡೆಗೊಂಡ ಟಾಲಿವುಡ್ ರೆಬೆಲ್​ ಸ್ಟಾರ್​, ನಟ ಪ್ರಭಾಸ್​ ಅಭಿನಯದ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿ’ ಚಿತ್ರ ಇದೀಗ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದಲ್ಲದೇ ಸಿನಿಪ್ರೇಕ್ಷಕರಿಂದ ಅತ್ಯುತ್ತಮ ವಿಮರ್ಶೆ ಕೂಡ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಚಿತ್ರದ ಯಶಸ್ಸನ್ನು ಸಂಭ್ರಮಿಸಿದ ಪ್ರಭಾಸ್​ ಹಾಗೂ ಚಿತ್ರತಂಡ, ಈ ಸಕ್ಸಸ್​ಗೆ ಕಾರಣರಾದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದ ತಿಳಿಸಿದೆ. ಮೊದಲ ದಿನವೇ ನೋಡುಗರಿಂದ ಉತ್ತಮ ರೆಸ್ಪಾನ್ಸ್ ಪಡೆದ ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ಇದೀಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1,100 ಕೋಟಿ ರೂ. ಕ್ಲಬ್​ ಸೇರುವುದರ ಜತೆಗೆ ಟಾಲಿವುಡ್​ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.

ತಮ್ಮ ನೆಚ್ಚಿನ ನಟ ಪ್ರಭಾಸ್​ ಅವರ ಪ್ಯಾನ್ ಇಂಡಿಯಾ 'ಕಲ್ಕಿ' ಸಿನಿಮಾದ ಯಶಸ್ಸಿಗೆ ಭಾರೀ ಸಂತಸಪಟ್ಟಿದ್ದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, 2010ರಲ್ಲಿ ರೆಬೆಲ್​ ಸ್ಟಾರ್​ ಮತ್ತು ನಟಿ ಕಾಜಲ್ ಅಗರ್ವಾಲ್​ ಅಭಿನಯದ ಬ್ಲಾಕ್​ಬಸ್ಟರ್​ 'ಡಾರ್ಲಿಂಗ್'​ ಸಿನಿಮಾ ಅಂದು ನೋಡುಗರ ಮನಗೆದ್ದು, ಕ್ಲಾಸಿಕ್​ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿತ್ತು. ಇದೀಗ ಈ ಸಿನಿಮಾ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಲು ಎದುರುನೋಡುತ್ತಿದೆ.

ಕಳೆದ ಕೆಲವು ದಿನಗಳಿಂದ ಈ ಕುರಿತು ಜಾಲತಾಣಗಳಲ್ಲಿ ಭಾರೀ ವದಂತಿಗಳು ಹರಿದಾಡುತ್ತಿತ್ತು. ಆದ್ರೆ, ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. ಇದೀಗ ನಿರ್ದೇಶಕ ಎ. ಕರುಣಾಕರನ್​ ನಿರ್ದೇಶಿಸಿದ 'ಡಾರ್ಲಿಂಗ್'​ ಸಿನಿಮಾವನ್ನು ಇದೇ ಸೆಪ್ಟಂಬರ್​ 23ರಂದು ಕೆಲವು ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ ಎಂಬ ಮಾಹಿತಿ ಲಭಿಸಿದೆ. ರೊಮ್ಯಾನ್ಸ್, ಕಾಮಿಡಿ, ಡ್ರಾಮಾ ಜಾನರ್ ಹೊಂದಿರುವ ಈ ಚಿತ್ರವು ಅಂದು ಸೂಪರ್​ಹಿಟ್​ ಫ್ಯಾಮಿಲಿ ಎಂಟರ್​​ಟೈನರ್​ ಸಿನಿಮಾವಾಗಿ ಹೊರಹೊಮ್ಮಿತ್ತು. ತೆರೆಮೇಲೆ ಪ್ರಭಾಸ್​-ಕಾಜಲ್​ ಜೋಡಿ ಮಾಡಿದ್ದ ಮೋಡಿ ಇಂದಿಗೂ ಪ್ರೇಕ್ಷಕರ ಕಣ್ಣಿನಲ್ಲಿ ಕಟ್ಟಿದಂತಿದೆ ಎಂದರೆ ತಪ್ಪಾಗಲಾರದು.

ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದ್ದ ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್​ ಕುಮಾರ್ ಅವರ​ ಸಂಗೀತ ಸಂಯೋಜನೆಯಿದೆ. ಚಿತ್ರದಲ್ಲಿ ಪ್ರಭಾಸ್​, ಕಾಜಲ್ ಅಗರ್ವಾಲ್​, ಪ್ರಭು, ಶ್ರದ್ಧಾ ದಾಸ್​, ಅತುಥಿ ಪ್ರಸಾದ್​, ಎಂ.ಎಸ್​. ನಾರಾಯಣ, ಮುಖೇಶ್​ ರಾಶಿ, ಕೋಟಾ ಶ್ರೀನಿವಾಸ್ ರಾವ್, ಶ್ರೀನಿವಾಸ ರೆಡ್ಡಿ ಸೇರಿದಂತೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).