ನ್ಯೂಸ್

ಶಕ್ತಿಶಾಲಿ ಭೂಕಂಪ- 6.1 ಮ್ಯಾಗ್ನಿಟ್ಯೂಡ್​ ಕಂಪನ ದಾಖಲಾಯಿತು ಜಪಾನ್​ ಸಮೀಪ

ಟೋಕಿಯೋ: ಜಪಾನ್​ನಲ್ಲಿ ಸೋಮವಾರ ಬೆಳಗ್ಗೆ ಶಕ್ತಿಶಾಲಿ ಭೂಕಂಪ ಸಂಭವಿಸಿದ್ದು, 6.1 ಮ್ಯಾಗ್ನಿಟ್ಯೂಡ್​ ತೀವ್ರತೆ ದಾಖಲಾಗಿದೆ. ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಬೇಸಿನ್​​ ಭೂಕಂಪ ವಲಯದಲ್ಲೇ ಇದ್ದು, ಜಪಾನ್​ ಅದೇ ವ್ಯಾಪ್ತಿಯಲ್ಲಿದೆ.

ಹವಾಮಾನ ಸಂಸ್ಥೆಯ ಮಾಹಿತಿ ಪ್ರಕಾರ, ಮಿಯಾಗಿ ಪ್ರದೇಶದಲ್ಲಿ ಬೆಳಗ್ಗೆ 5.30ಕ್ಕೆ ಈ ಕಂಪನ ಸಂಭವಿಸಿದ್ದು ಇದರ ಕೇಂದ್ರ ಬಿಂದು 50 ಕಿ.ಮೀ. ಆಳದಲ್ಲಿ ಕಂಡುಬಂದಿದೆ. ಭೂಕಂಪದ ಕಾರಣಕ್ಕೆ ತ್ಸುನಾಮಿ ಕುರಿತ ಎಚ್ಚರಿಕೆ ಏನೂ ಇಲ್ಲ. ಯುಎಸ್​ ಜಿಯಾಲಾಜಿಕಲ್​ ಸರ್ವೇ ಪ್ರಕಾರ ಈ ಭೂಕಂಪದ ಕೇಂದ್ರ ಬಿಂದು ಪೆಸಿಫಿಕ್​ ಸಾಗರ ಮೇಲ್ಮೈನಿಂದ 26 ಮೈಲಿ ಆಳದಲ್ಲಿ ಇದೆ. ಭೂಕಂಪದಿಂದ ಆಗಿರಬಹುದಾದ ನಾಶ ನಷ್ಟವನ್ನು ಇನ್ನೂ ಅಂದಾಜಿಸಲಾಗಿಲ್ಲ.

ಶನಿವಾರವೂ ಜಪಾನ್​ನ ಪಶ್ಚಿಮ ಕರಾವಳಿಯ ಒಗಸವರ ದ್ವೀಪಗಳ ಸಮೀಪ ರಿಕ್ಟರ್ ಮಾಪಕದಲ್ಲಿ 6.9 ಮ್ಯಾಗ್ನಿಟ್ಯೂಡ್ ತೀವ್ರತೆಯ ಭೂಕಂಪ ಸಂಭವಿಸಿತ್ತು. 2011ರಲ್ಲಿ ಮಿಯಾಗಿಯಿಂದ ಪೂರ್ವಕ್ಕೆ ಅಂದಾಜು 130 ಕಿ.ಮೀ. ದೂರದಲ್ಲಿ ಭೀಕರವಾದ 9.0 ಮ್ಯಾಗ್ನಿಟ್ಯೂಡ್ ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದು ತ್ಸುನಾಮಿಯನ್ನು ಸೃಷ್ಟಿಸಿ ಫುಕುಶಿಮಾ ನಂ.1 ಅಣು ಸ್ಥಾವರಕ್ಕೆ ಹಾನಿ ಎಸಗಿತ್ತು. ಪರಿಣಾಮ ಅಂದಾಜು 16,000 ಜನ ಸಾವನ್ನಪ್ಪಿದ್ದರು. (ಏಜೆನ್ಸೀಸ್)