ನ್ಯೂಸ್

'ಅಧಿಕಾರ ಸಿದ್ಧಾಂತ' ಒಂದಕ್ಕೇ ಅಂಟಿಕೊಂಡ ಕಾರಣ ಮೈತ್ರಿಕೂಟಗಳ ಆಪ್ತಮಿತ್ರರಾಗಿದ್ದರು ಅವರು..

manjunathktgns

ಪಟನಾ: ಭಾರತದ ರಾಜಕೀಯ ಇತಿಹಾಸ ಗಮನಿಸಿದರೆ, ದಶಕಗಳ ಕಾಲ ಆಳ್ವಿಕೆ ನಡೆಸಿದ ಮೈತ್ರಿಕೂಟ ಸರ್ಕಾರಗಳಲ್ಲಿ ಸಚಿವರಾಗಿದ್ದವರು ಬಿಹಾರದ ಪ್ರಭಾವಿ ನಾಯಕ ರಾಮವಿಲಾಸ್ ಪಾಸ್ವಾನ್​. ಜಾತ್ಯತೀತ ಮಂತ್ರ ಪಠಿಸುತ್ತಲೇ ಅಧಿಕಾರದ ಅವಕಾಶ ಸಿಕ್ಕಾಗ ಸಿದ್ಧಾಂತಗಳಿಗೆಲ್ಲ ತಿಲಾಂಜಲಿ ನೀಡಿ, ಸೈದ್ಧಾಂತಿಕ ವಿರೋಧಿಗಳ ಜತೆಯೇ ಕೈಜೋಡಿಸುವ ಮೂಲಕ ಅವಕಾಶವಾದಿತನವನ್ನು ಮೆರೆದವರ ಪಟ್ಟಿಯಲ್ಲಿ ಇವರೇ ಅಗ್ರಸ್ಥಾನಿ.

ರಾಜಕೀಯ ದ್ವಂದ್ವಗಳ ನಡುವೆಯೇ 1996-2017ರ ಅವಧಿಯ ಎಲ್ಲ ಒಕ್ಕೂಟಗಳ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದು ಈಗ ಇತಿಹಾಸ. 2005ರಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎದುರಿಸಿತ್ತು. ಆದರೆ, ಯಾವುದೇ ಮೈತ್ರಿ ಕೂಟ ಅಥವಾ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಇದೇ ವೇಳೆ, ಭ್ರಷ್ಟತನದಿಂದ ಲಾಲು ಪ್ರಸಾದ್ ಯಾದವ್ ಅಥವಾ ಎನ್‌ಡಿಎ ಒಕ್ಕೂಟಕ್ಕೆ ಎಲ್‌ಜೆಪಿ ಬೆಂಬಲ ನೀಡುವುದಿಲ್ಲ ಎಂದು ಪಾಸ್ವಾನ್ ಘೋಷಿಸಿದ್ದರಿಂದ ಅತಂತ್ರ ಸ್ಥಿತಿ ಉದ್ಭವಾಗಿತ್ತು.

ಈ ಸಂದರ್ಭದಲ್ಲಿ ಎಲ್‌ಜೆಪಿಯ 12 ಭಿನ್ನ ಶಾಸಕರನ್ನು ಸೆಳೆಯುವ ಮೂಲಕ ರಾಜಕೀಯ ಚಾಕಚಕ್ಯತೆ ಮೆರೆದು ಸರ್ಕಾರ ರಚಿಸಲು ಮುಂದಾದ ಜೆಡಿಯು ಮುಖಂಡ ನಿತೀಶ್ ಕುಮಾರ್ ಪ್ರಯತ್ನವನ್ನು ಅಂದಿನ ಬಿಹಾರ್ ರಾಜ್ಯಪಾಲ ಬೂಟಾ ಸಿಂಗ್ ಭಗ್ನಗೊಳಿಸಿದ್ದರು. ಯಾವುದೇ ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದ ಕಾರಣ ಮತ್ತೊಮ್ಮೆ ಚುನಾವಣೆ ಎದುರಿಸುವಂತೆ ಸೂಚಿಸಿ, ರಾಷ್ಟ್ರಪತಿ ಆಳ್ವಿಕೆ ಹೇರುವ ಮೂಲಕ ಬೂಟಾ ಸಿಂಗ್ ನಿತೀಶ್‌ಗೆ ಬ್ರೇಕ್ ಹಾಕಿದ್ದರು. ಮತ್ತೆ 2005ರ ನವೆಂಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಾಸ್ವಾನ್ ನೇತೃತ್ವದ ತೃತೀಯ ತರಂಗ ಧೂಳೀಪಟವಾಯಿತು. ಕಾಂಗ್ರೆಸ್-ಲಾಲು ಪ್ರಸಾದ್ ನೇತೃತ್ವದ ಮೈತ್ರಿಕೂಟ ಅಲ್ಪಮತಕ್ಕೆ ಕುಸಿದರೆ, ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಿತ್ತು.

‘ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಕೇಂದ್ರ ಸರ್ಕಾರದ ಮೇಲೆ ಯಾವುದೇ ತೆರನಾದ ಪರಿಣಾಮ ಬೀರುವುದಿಲ್ಲ. ನಾನು ಮತ್ತು ಲಾಲು ಪ್ರಸಾದ್ ಯಾದವ್ ಕೇಂದ್ರ ಸಚಿವರಾಗಿ ಮುಂದುವರಿಯಲಿದ್ದೇವೆ’ ಎಂದು ಈ ಸಂದರ್ಭದಲ್ಲಿ ಪಾಸ್ವಾನ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದಾಗಿ, 2014ರಲ್ಲಿ ಕೇಂದ್ರದಲ್ಲಿ ಎನ್​ಡಿಎ ಮೈತ್ರಿಕೂಟ ಸೇರಿಕೊಂಡ ಅವರು ಪುನಃ ಕೇಂದ್ರದಲ್ಲಿ ಸಚಿವರಾಗಿ ಮುಂದುವರಿದ್ದದ್ದು ಈಗ ಇತಿಹಾಸ. (ಏಜೆನ್ಸೀಸ್)