ನ್ಯೂಸ್

ಬರದ ಬೆನ್ನಲ್ಲೇ ವಿದ್ಯುತ್ ಕ್ಷಾಮ: ಮಿಗತೆಯಿಂದ ಕೊರತೆಯತ್ತ ಸಾಗಿದ ರಾಜ್ಯದ ವಿದ್ಯುತ್ ಉತ್ಪಾದನೆ; 3 ತಿಂಗಳಲ್ಲಿ ಬೇರೆಡೆಗಳಿಂದ 2,500 ದಶಲಕ್ಷ ಯೂನಿಟ್ ಖರೀದಿ

| ಮೃತ್ಯುಂಜಯ ಕಪಗಲ್ ಬೆಂಗಳೂರು 
ಮುಂಗಾರು ಮುನಿಸಿನಿಂದ ಈಗಾಗಲೇ ಬರಗಾಲದ ಸುಳಿಗೆ ಸಿಲುಕಿರುವ ರಾಜ್ಯ, ವಿದ್ಯುತ್ ಕ್ಷಾಮ ತಲೆದೋರುವ ಅಪಾಯದಿಂದ ಮತ್ತಷ್ಟು ಕತ್ತಲಿನ ದಿನಗಳ ಆತಂಕಕ್ಕೆ ಸಿಲುಕಿದೆ. ವಿದ್ಯುತ್ ಲಭ್ಯತೆ ಮತ್ತು ಬೇಡಿಕೆ ನಿರ್ವಹಣೆಯಲ್ಲಿ ಎಡವಿದ್ದರಿಂದ ಕರ್ನಾಟಕಕ್ಕೆ ವಿದ್ಯುತ್ ಮಿಗತೆ (ಪವರ್ ಸರ್​ಪ್ಲಸ್ ಸ್ಟೇಟ್) ರಾಜ್ಯವೆಂಬ ಹೆಗ್ಗಳಿಕೆ ಕಳಚಿಬಿದ್ದು, ಕೊರತೆಯತ್ತ ಕುಸಿಯುತ್ತಿದೆ.

ಮುಂಗಾರು ಮಳೆ ವೈಫಲ್ಯದಿಂದ ಜಲ ಮೂಲ, ಕಲ್ಲಿದ್ದಲು ದಾಸ್ತಾನು ಸಮಸ್ಯೆಯಿಂದ ಶಾಖೋತ್ಪನ್ನ ಮೂಲದ ವಿದ್ಯುತ್ ಉತ್ಪಾದನೆ ಕುಸಿದಿದೆ. ಆದರೆ ಬೇಡಿಕೆ, ಬಳಕೆಯು ವಾರ್ಷಿಕ ಮುನ್ನಂದಾಜು ಮೀರಿ ನಾಗಾಲೋಟದಲ್ಲಿದೆ. ಕೃಷಿ, ಕೈಗಾರಿಕೆ, ವಾಣಿಜ್ಯ, ಗೃಹ ವಲಯಗಳ ಬೇಡಿಕೆ ಹೆಚ್ಚತೊಡಗಿದೆ. ಇದ ರಿಂದಾಗಿ ದಿನದ ಗರಿಷ್ಠ ಬೇಡಿಕೆ 13,500 ಸಾವಿರ ಮೆಗಾವಾಟ್​ಗೆ ಏರಿದ್ದರೆ, ಬಳಕೆ 250 ದಶಲಕ್ಷ ಯೂನಿಟ್​ಗೆ ತಲುಪಿದೆ. 3 ತಿಂಗಳಲ್ಲಿ ಒಟ್ಟಾರೆ 2,500 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿಸಿದೆ. ಆದರೂ ತಾಂತ್ರಿಕ ಅಡಚಣೆ ನೆಪದಲ್ಲಿ ಅನಧಿಕೃತ ಲೋಡ್​ಶೆಡ್ಡಿಂಗ್ ಮೂಲಕ ಒತ್ತಡ ಸರಿದೂಗಿಸಲು ಕಸರತ್ತು ನಡೆಸಿದೆ. ಬೇಸಿಗೆ ಲಕ್ಷ್ಯದಲ್ಲಿಟ್ಟುಕೊಂಡು ವಿವಿಧ ಮೂಲಗಳಿಂದ ವಿದ್ಯುತ್ ಹಾಗೂ ಕಲ್ಲಿದ್ದಲು ಖರೀದಿಗೆ ಇಂಧನ ಇಲಾಖೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದೆ.

ನಿರ್ಲಕ್ಷ್ಯದ ಪರಿಣಾಮ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಖಾಸಗಿಯವರದ್ದೇ ಪಾರಮ್ಯ. ಮಳೆ ಕೊರತೆ ಮಾತ್ರವಲ್ಲ, ಹಿಂದಿನ ಹಾಗೂ ಈಗಿನ ಸರ್ಕಾರದ ನಿರ್ಲಕ್ಷ್ಯದಿಂದ ವಿದ್ಯುತ್ ಅಭಾವ ಸೃಷ್ಟಿಯಾಗಿದೆ. ಸಾರ್ವಜನಿಕ ಸ್ವಾಮ್ಯದ ಕೆಪಿಸಿಎಲ್ ಕಳೆದ ಕೆಲ ವರ್ಷಗಳಿಂದ ಮೂಲೆಗುಂಪಾಗಿದ್ದು, ಹೊಸದಾಗಿ ಒಂದು ಯುನಿಟ್ ವಿದ್ಯುತ್ ಅನ್ನೂ ಪ್ರಸರಣ ಜಾಲಕ್ಕೆ ಸೇರಿಸಿಲ್ಲ.

ಕಲ್ಲಿದ್ದಲು ಖರೀದಿ ವಿಷಯದಲ್ಲಿ ಮೀನಮೇಷ ಎಣಿಸಿದ್ದರಿಂದ ಒಂದು ವಾರಕ್ಕೆ ಬೇಕಾಗುವಷ್ಟು ದಾಸ್ತಾನಿಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದು ಶಾಖೋತ್ಪನ್ನ ಸ್ಥಾವರದ ಪೂರ್ಣ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಗೆ ಅಡ್ಡಗಾಲು ಹಾಕಿದೆ. ಅಗತ್ಯವಿರುವಷ್ಟು ಕಲ್ಲಿದ್ದಲು ತರಿಸಿಕೊಳ್ಳುವ ಬದಲು ಬೇಡಿಕೆ ಇಲ್ಲವೆಂಬ (ನೋ ಲೋಡ್ ಡಿಮ್ಯಾಂಡ್) ಮೇಲ್ನೋಟದ ಕಾರಣ ನೀಡಿ ಉಷ್ಣ ವಿದ್ಯುತ್ ಸ್ಥಾವರಗಳ ಬಿಕ್ಕಟ್ಟು ಮುಚ್ಚಿಡಲು ಪ್ರಯತ್ನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಗಣಿ ಗುತ್ತಿಗೆ ನನೆಗುದಿಗೆ: ಜಲ, ಪವನ, ಸೌರ ಮೂಲದ ವಿದ್ಯುತ್ ಯಥೇಚ್ಛವಾಗಿ ಲಭ್ಯವಿದೆ. ಹೆಚ್ಚುವರಿ ಆರ್ಥಿಕ ಹೊರೆ ಹೇರುವ ಕಲ್ಲಿದ್ದಲು ಗಣಿ ಗುತ್ತಿಗೆ, ಖರೀದಿ ಅನಗತ್ಯವೆಂದು ಆರ್ಥಿಕ ಇಲಾಖೆ ಸಲಹೆ ನೀಡಿತು. ಆರ್ಥಿಕ ಇಲಾಖೆ ಹೇಳಿದ್ದಕ್ಕೆಲ್ಲ ಕೆಪಿಸಿಎಲ್ ಆಡಳಿತ ಮಂಡಳಿ ಮುಖ್ಯಸ್ಥರು ತಲೆಯಾಡಿಸಿದರು. ಹೀಗಾಗಿ ಕಲ್ಲಿದ್ದಲು ಗಣಿ ಗುತ್ತಿಗೆ ಪ್ರಸ್ತಾವನೆಗಳು 10 ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಬಿಟಿಪಿಎಸ್​ಗೆ ವೆಸ್ಟರ್ನ್ ಕೋಲ್ ಫೀಲ್ಡ್​ನಲ್ಲಿ ಗುತ್ತಿಗೆ ಪಡೆದ ಗಣಿಗಳಿಂದ ಕಲ್ಲಿದ್ದಲು ತೆಗೆದು, ಸಾಗಣೆ ಗುತ್ತಿಗೆ ನೀಡುವ ಪ್ರಕ್ರಿಯೆ ಮಂದಗತಿಯಲ್ಲಿದೆ. ವಿದ್ಯುತ್ ಬೇಡಿಕೆ ಏರಿಕೆಯ ಹಿನ್ನೆಲೆಯಲ್ಲಿ ದಿಢೀರ್ ಆಗಿ ಪ್ರತಿದಿನ ಎರಡು ಹೆಚ್ಚುವರಿ ರೇಕ್ ಕಲ್ಲಿದ್ದಲು (ಪ್ರತಿದಿನ ಅಂದಾಜು 7,500 ಮೆಟ್ರಿಕ್ ಟನ್) ಪೂರೈಸಬೇಕೆಂಬ ಕೋರಿಕೆಗೆ ಕೋಲ್ ಇಂಡಿಯಾ ಈತನಕ ಸ್ಪಂದಿಸಿಲ್ಲ ಎಂದು ಇಂಧನ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸದ್ಬಳಕೆಯಾಗದ ಸ್ಥಾಪಿತ ಸಾಮರ್ಥ್ಯ: ಮೆರಿಟ್ ಆನ್ ಡಿಸ್ಪಾ ್ಯ್ ಮುಖೇನ ಕೈಗೆಟುಕುವ ದರದಲ್ಲಿ ವಿದ್ಯುತ್ ಲಭ್ಯತೆಯಿಂದ ರಾಜ್ಯದಲ್ಲಿ ಸ್ಥಾಪಿತ ವಿದ್ಯುತ್ ಸಾಮರ್ಥ್ಯ ಸದ್ಬಳಕೆಯಾಗಿಲ್ಲ. ಜಲ, ಶಾಖೋತ್ಪನ್ನ ಸೇರಿ ವಿವಿಧ ಮೂಲಗಳ ಒಟ್ಟು ಸ್ಥಾಪಿತ ಸಾಮರ್ಥ್ಯ 32,009 ಮೆಗಾವಾಟ್ ಆಗಿದೆ. ಆದರೆ, ನಾಲ್ಕೈದು ವರ್ಷಗಳಿಂದ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲಾಗಿದೆ.

ಶಾಖೋತ್ಪನ್ನ ಮೂಲದ ವಿದ್ಯುತ್ ದುಬಾರಿ ಎಂಬ ಕಾರಣಕ್ಕೆ ಎಸ್ಕಾಂಗಳ ಹಿಂಜರಿಕೆ, ಖಾಸಗಿ ವಲಯದತ್ತ ಸರ್ಕಾರದ ಒಲವು, ದೀರ್ಘಾವಧಿ ಒಡಂಬಡಿಕೆಯಿಂದ ಸರ್ಕಾರಿ ವಲಯದ ವಿದ್ಯುತ್ ಉತ್ಪಾದನೆ ಕುಸಿದಿದೆ ಎಂದು ಮೂಲಗಳು ವಿಶ್ಲೇಷಿಸಿವೆ.

ಲೆಕ್ಕಾಚಾರ ತಲೆಕೆಳಗು: ಹಿಂದಿನ ಎರಡು ವರ್ಷ ಭರಪೂರ ಮಳೆಯಿಂದ ವಿದ್ಯುತ್ ಮಾರಾಟ ಮಾಡಿ ಸರ್ಕಾರ ಆದಾಯ ಗಳಿಸಿದ್ದರೆ, ಈ ಬಾರಿ ಲೆಕ್ಕಾಚಾರ ತಲೆಕೆಳಗಾಗಿದೆ. ಜುಲೈನಲ್ಲಿ 913.47 ದಶಲಕ್ಷ ಯೂನಿಟ್, ಆಗಸ್ಟ್- 942.43 ಹಾಗೂ ಸೆಪ್ಟೆಂಬರ್ 23ರವರೆಗೆ- 889.12 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿಸಲಾಗಿದೆ. ಕೆಇಆರ್​ಸಿಗೆ ಎಸ್ಕಾಂಗಳು ಸಲ್ಲಿಸಿದ 2024ರ ವಿದ್ಯುತ್ ಖರೀದಿ ಪ್ರಸ್ತಾವನೆಯು ಏರುಪೇರಾಗುವ ಲಕ್ಷಣಗಳು ನಿಚ್ಚಳವಾಗಿವೆ. ಬೆಸ್ಕಾಂ 24,187.36 ಕೋಟಿ ರೂ., ಮೆಸ್ಕಾಂ 3,787.41, ಚೆಸ್ಕಾಂ- 7,709.80 ಮತ್ತು ಜೆಸ್ಕಾಂ- 6,188.53 ಕೋಟಿ ರೂ. ವಿದ್ಯುತ್ ಖರೀದಿ ವೆಚ್ಚವನ್ನು ಪ್ರಸ್ತಾಪಿಸಿವೆ.

ಕಲ್ಲಿದ್ದಲು ಆಮದು ಆಸಕ್ತಿ: ಜಲ ವಿದ್ಯುದಾಗರಗಳನ್ನು ನೆಚ್ಚಿಕೊಳ್ಳುವಂತಿಲ್ಲ, ಶಾಖೋತ್ಪನ್ನ ಸ್ಥಾವರಗಳ ಮೇಲೆ ಅವಲಂಬನೆ ಅನಿವಾರ್ಯವೆಂಬ ಕಟುಸತ್ಯವನ್ನು ಸಿಎಂ ಸಿದ್ದರಾಮಯ್ಯ ಮನಗಂಡಿದ್ದಾರೆ. ಸಂಭಾವ್ಯ ವಿದ್ಯುತ್ ಕೊರತೆ ನಿವಾರಣೆಗೆ ದೇಶ-ವಿದೇಶದಿಂದ ಕಲ್ಲಿದ್ದಲು ಖರೀದಿಗೆ ಕೆಪಿಸಿಎಲ್ ನಿರ್ದೇಶಕರ ಆಡಳಿತ ಮಂಡಳಿ ಸಭೆಯಲ್ಲಿ ಅಸ್ತು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳ ಅವಧಿಗೆ ಒಟ್ಟು 15 ಲಕ್ಷ ಟನ್ ಕಲ್ಲಿದ್ದಲು ಆಮದು ಮತ್ತು ಪೂರೈಕೆಗೆ ಟೆಂಡರ್ ಕರೆಯಲು ನಿರ್ಧರಿಸಿ, ಮೊದಲ ಹಂತದಲ್ಲಿ ವೈಟಿಪಿಎಸ್​ಗಾಗಿ 2.5 ಲಕ್ಷ ಟನ್ ಕಲ್ಲಿದ್ದಿಲು ಪೂರೈಕೆಗೆ ಟೆಂಡರ್ ಕರೆದಿದೆ. ಆದರೆ, ಸಿಂಗರೇಣಿ ಮೂಲದ ಗಣಿಗಳ ಕಲ್ಲಿದ್ದಲು ಗುಣಮಟ್ಟ ಉತ್ತಮವಾಗಿದೆ. ಬಾಕಿ ಸಾವಿರ ಕೋಟಿ ರೂ. ಪೈಕಿ ಒಂದಿಷ್ಟು ಪಾವತಿಸಿದರೆ ಅಲ್ಲಿಂದ ಹೆಚ್ಚೆಚ್ಚು ಕಲ್ಲಿದ್ದಲು ತರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಲೋಡ್​ಶೆಡ್ಡಿಂಗ್ ಸಂಕಟ: ಪದೇಪದೆ ವಿದ್ಯುತ್ ಕಡಿತವು ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ. ಉತ್ತಮ ಗುಣಮಟ್ಟ, ಸ್ಥಿರತೆಯಲ್ಲಿ ವ್ಯತ್ಯಯದಿಂದ ಉದ್ಯಮ-ವಹಿವಾಟು ಕ್ಷೇತ್ರವು ಮುಗ್ಗಟ್ಟು ಎದುರಿಸುತ್ತಿದೆ. ಇನ್ನು ನೀರಾವರಿ ಪಂಪ್​ಸೆಟ್​ಗಳಿಗೆ ಏಳು ತಾಸು ಮೂರು ಫೇಸ್ ವಿದ್ಯುತ್ ನಿಗದಿತ ವೇಳೆಗೆ ಪೂರೈಕೆಯ ಗ್ಯಾರಂಟಿಯೇ ರೈತಾಪಿ ವರ್ಗಕ್ಕೆ ಇಲ್ಲದಂತಾಗಿದೆ. ಬೆಳಗ್ಗೆಯಂತೂ ಸಿಗುವುದಿಲ್ಲ, ರಾತ್ರಿಗಾದರೂ ಪೂರೈಸಬೇಕೆಂಬ ಕೂಗು ಅರಣ್ಯರೋದನವಾಗಿದೆ. ವೋಲ್ಟೇಜ್ ಏರುಪೇರು, ಅನಧಿಕೃತ ಲೋಡ್​ಶೆಡ್ಡಿಂಗ್​ನಿಂದಾಗಿ ನೀರಾವರಿ ಪಂಪ್​ಸೆಟ್​ಗಳಿಗೆ ಹೆಚ್ಚೆಂದರೆ ನಾಲ್ಕು ತಾಸು ವಿದ್ಯುತ್ ಲಭಿಸುತ್ತಿದೆ. ಮಳೆಯಿಲ್ಲದೆ ಕಂಗಾಲಾಗಿರುವ ರೈತರಿಗೆ ಅಕಾಲಿಕ ವಿದ್ಯುತ್ ಕಡಿತ ಬರೆ ಹಾಕಿದೆ.

  • ದೂರದೃಷ್ಟಿ ಯೋಜನೆಗಳ ನಿರ್ಲಕ್ಷ್ಯ ಪರಿಣಾಮ
  • ಆರ್ಥಿಕ ಹೊರೆಯ ನೆಪ, ಕಲ್ಲಿದ್ದಲು ಗಣಿ ಗುತ್ತಿಗೆ ನನೆಗುದಿ
  • 15 ಲಕ್ಷ ಟನ್ ಕಲ್ಲಿದ್ದಲು ಆಮದಿಗೆ ಮುಂದಾದ ಕೆಪಿಸಿಎಲ್
  • ಎಸ್ಕಾಂಗಳ ಹಿಂಜರಿಕೆ, ಸದ್ಬಳಕೆ ಯಾಗದ ಸ್ಥಾಪಿತ ಸಾಮರ್ಥ್ಯ

ಜಲ ಮೂಲ ಕ್ಷೀಣ: ಬೃಹತ್, ಮಧ್ಯಮ ಜಲ ವಿದ್ಯುದಾಗರಗಳ ಜಲಸಂಗ್ರಹವೂ ಕ್ಷೀಣಿಸಿದೆ. ಲಿಂಗನಮಕ್ಕಿ, ಸೂಪಾ ಮತ್ತು ಮಾಣಿ ಜಲಾಶಯಗಳಿಂದ 2024ರ ಜೂನ್ 30ರವರೆಗೆ ಪ್ರತಿದಿನ 14.44 ದಶಲಕ್ಷ ಯೂನಿಟ್ ವಿದ್ಯುತ್ ಲಭ್ಯತೆ ಅಂದಾಜಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 26.19 ದಶಲಕ್ಷ ಯೂನಿಟ್ ಲಭ್ಯತೆಯಿತ್ತು. ನಾಗಝುರಿ, ಕದ್ರಾ, ಕೊಡ್ಸಳ್ಳಿ ಇತ್ಯಾದಿ ಜಲಾಶಯಗಳಿಂದ ಒಟ್ಟು 9.48 ದಶಲಕ್ಷ ಯೂನಿಟ್ ಲಭ್ಯವಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 15.04 ದಶಲಕ್ಷ ಯೂನಿಟ್ ಲಭ್ಯತೆಯಿತ್ತು.