ನ್ಯೂಸ್

ಬೀದಿ ಬದಿ ಮರಕ್ಕೆ ಭಿತ್ತಿ ಪತ್ರ ಅಂಟಿಸುವವರೇ ಹುಷಾರ್​​! 6 ತಿಂಗಳು ಜೈಲುವಾಸ ಅನುಭವಿಸಬೇಕಾದೀತು ಎಚ್ಚರ

ಬೆಂಗಳೂರು : ಸಿಕ್ಕ ಸಿಕ್ಕ ಮರಗಳಿಗೆ ಭಿತ್ತಿ ಪತ್ರಗಳನ್ನು ಮೊಳೆ ಅಥವಾ ಪಿನ್ ಹೊಡೆದು ಹಾನಿ ಮಾಡಿದರೆ ಇನ್ನೂ ಮುಂದೆ ಕ್ರಿಮಿನಲ್ ಕೇಸ್ ದಾಖಲಾಗುತ್ತೆ ಎಚ್ಚರ. ಇತ್ತೀಚೆಗೆ ನಗರದಲ್ಲಿ ಮರಗಳಿಗೆ ಭಿತ್ತಿ ಪತ್ರ ಅಂಟಿಸುವರ ವಿರುದ್ಧ ಅಭಿಯಾನ ನಡೆಯುತ್ತಿದೆ. ಇದರ ಬೆನ್ನಲ್ಲಿಯೇ ಪೊಲೀಸ್ ಠಾಣೆಗೆ ದೂರು ಸಹ ನೀಡಲಾಗುತ್ತಿದೆ.

ಕಬ್ಬನ್ ಪೇಟೆ ನಿವಾಸಿ ಪ್ರೇಮ್ ಕುಮಾರ್ ಎಂಬುವರು, ಮರಕ್ಕೆ ಭಿತ್ತಿ ಪತ್ರ ಅಂಟಿಸಿದವರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಮೇರೆಗೆ ಭಿತ್ತಿ ಪತ್ರದಲ್ಲಿದ್ದ ಮೊಬೈಲ್ ನಂಬರ್‌ಗಳ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಬ್ಬನ್ ಪೇಟೆ ಮುಖ್ಯ ರಸ್ತೆಯ ಬಹುತೇಕ ಮರಗಳ ಮೇಲೆ ಬ್ಯಾಂಕಿಂಗ್ ಸೇವೆಗೆ ಟೆಲಿಕಾಲರ್ ಬೇಕಾಗಿದ್ದಾರೆ ಎಂದು ಭಿತ್ತಿ ಪತ್ರವನ್ನು ಮೊಳೆ ಮತ್ತು ಪಿನ್ ಹೊಡೆದಿದ್ದಾರೆ. ಇದರಿಂದ ಮರಗಳಿಗೆ ಹಾನಿ ಮತ್ತು ನಗರ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಕೋರ್ಟ್‌ನಲ್ಲಿ ಸಾಬೀತಾದರೇ 6 ತಿಂಗಳು ಜೈಲು ಶಿಕ್ಷೆ ಅಥವಾ 1 ಸಾವಿರ ರೂ. ದಂಡ ವಿಧಿಸುವ ಸಾಧ್ಯತೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.