ನ್ಯೂಸ್

ಡಾಲಿ Dhananjay ಮದುವೆಗೆ ವಿಭಿನ್ನವಾಗಿ ಶುಭಕೋರಿದ ಅಂಚೆ ಇಲಾಖೆ; ನಿಮ್ಮ ಪ್ರೀತಿಗೆ ಶರಣು ಎಂದ ಮಧುಮಗ

ಮೈಸೂರು: ಸ್ಯಾಂಡಲ್​ವುಡ್​ನ ದಿ ಮೋಸ್ಟ್ ಎಲಿಜೆಬಲ್​ ಬ್ಯಾಚುಲರ್ ಎಂದೇ ಖ್ಯಾತಿ ಪಡೆದಿದ್ದ ನಟ ರಾಕ್ಷಸ ಡಾಲಿ ಧನಂಜಯ್​ (Dhananjay) ಅವರು ಫೆಬ್ರವರಿ 16ರಂದು ವೈದ್ಯೆ ಧನ್ಯತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಈಗಾಗಲೇ ಮದುವೆಗೆ ಸಂಬಂಧಿಸಿದ ಸಕಲ ಶಾಸ್ತ್ರಗಳು ಶುರುವಾಗಿದೆ.

ಡಾಲಿ ಧನಂಜಯ್ (Dhananjay) ಅವರ ಹುಟ್ಟೂರಾದ ಅರಸೀಕೆರೆ ತಾಲ್ಲೂಕಿನ ಕಾಳೇನಹಳ್ಳಿ ಮದುವೆ ಸಂಭ್ರಮ ಮನೆ ಮಾಡಿದ್ದು, ಜೇಣುಕಲ್ಲು ಸಿದ್ದೇಶ್ವರ ಕೊಂಡ ತುಳಿದ ಬಳಿಕ ಮನೆದೇವರ ಪೂಜೆಯನ್ನು ನೆರವೇರಿಸಿದ್ದಾರೆ. ಇನ್ನೂ ನಟ ಡಾಲಿ ಧನಂಜಯ್ ಅವರ ಮದುವೆ ದಿನ ಹತ್ತಿರವಾಗುತ್ತಿದ್ದಂತೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಇದೀಗ ಅಂಚೆ ಇಲಾಖೆ ಕೂಡ ಹೊಸಜೀವನಕ್ಕೆ ಕಾಲಿಡಲಿರುವ ನವಜೋಡಿಗೆ ಶುಭ ಹಾರೈಸಿದೆ.

ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟ ಧನಂಜಯ್ (Dhananjay) ಅವರಿಗೆ ಅಂಚೆ ಇಲಾಖೆಯು 12 ವಿಶೇಷ ಸ್ಟಾಂಪ್​ ನೀಡುವ ಮೂಲಕ ಶುಭ ಹಾರೈಸಿದೆ. ಮೈಸೂರು ವಿಭಾಗದ ಅಂಚೆ ಇಲಾಖೆಯ ಅಧಿಕಾರಿಗಳು ಧನಂಜಯ್​ ಅವರಿಗೆ ಈ ವಿಶೇಷ ಸ್ಟಾಂಪ್​ಅನ್ನು ಹಸ್ತಾಂತರಿಸಿದ್ದು, ಧನಂಜಯ್​ ಇದನ್ನು ಕಂಡು ಫುಲ್ ಖುಷ್ ಆಗಿದ್ಧಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟ ಡಾಲಿ ಧನಂಜಯ್ (Dhananjay), ತಮ್ಮ ವಿವಾಹದ ಲಗ್ನಪತ್ರಿಕೆಯನ್ನು ಇನ್ ಲ್ಯಾಂಡ್ ಲೆಟರರ್‌ನಲ್ಲಿ ಕೈ ಬರಹದ ಮೂಲಕ ಬರೆದು ಸ್ಟಾರ್ ನಟರು ಹಾಗೂ ಮಾಧ್ಯಮದವರನ್ನು ಆಹ್ವಾನಿಸಿದ್ದರು. ಅವರು ಕೈ ಬರಹದ ಮೂಲಕ ಬರೆದ ಲಗ್ನ ಪತ್ರಿಕೆಯು ವೈರಲ್ ಆಗಿತ್ತು. ಅದೇ ಕಾರಣಕ್ಕಾಗಿ ಅಂಚೆ ಇಲಾಖೆಯು ಸ್ಟಾಂಪ್ ಉಡುಗೊರೆ ನೀಡುವ ಮೂಲಕ ಶುಭಾಶಯ ಕೋರಿದೆ.