ನ್ಯೂಸ್

Amit Shah | ಆರ್​ಜೆಡಿ ಅಧಿಕಾರಕ್ಕೆ ಬಂದರೆ ಕೊಲೆ, ಅಪಹರಣ ಮತ್ತು ಸುಲಿಗೆ ಎಂಬ ಹೊಸ ಮೂರು ಖಾತೆ ರಚನೆ! : ಅಮಿತ್​ ಷಾ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೊಲೆ, ಅಪಹರಣ ಮತ್ತು ಸುಲಿಗೆ ಎಂಬ ಮೂರು ಖಾತೆಗಳನ್ನು ರಚಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಭಾನುವಾರ (ನ 2) ಆರೋಪಿಸಿದ್ದಾರೆ.

ವೈಶಾಲಿ ಮತ್ತು ಮುಜಫರ್‌ಪುರದಲ್ಲಿ ನಡೆದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಷಾ, ಈ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರವನ್ನು ಉಳಿಸಿಕೊಂಡರೆ, ರಾಜ್ಯವನ್ನು ಪ್ರವಾಹ ನಿಯಂತ್ರಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನೂ ರಚಿಸುತ್ತದೆ, ಆರ್‌ಜೆಡಿ ಆಡಳಿತದ ಅವಧಿಯಲ್ಲಿನ ಜಂಗಲ್​ ರಾಜ್​ ಪುನರಾವರ್ತನೆಯಾಗುವುದನ್ನು ತಡೆಯಲು ಎಲ್ಲರು ಎನ್‌ಡಿಎಗೆ ಮತ ಹಾಕುವಂತೆ ಮನವಿ ಮಾಡಿದರು.

ಲಾಲು ಮಗ ಬಿಹಾರ ಮುಖ್ಯಮಂತ್ರಿಯಾದರೆ, ಅಪಹರಣ, ಸುಲಿಗೆ ಮತ್ತು ಕೊಲೆಗಳನ್ನು ಮೇಲ್ವಿಚಾರಣೆ ಮಾಡಲು ಇನ್ನೂ ಮೂರು ಹೊಸ ಖಾತೆಗಳನ್ನು ರಚಿಸಲಾಗುತ್ತದೆ. ಎನ್‌ಡಿಎಗೆ ನೀವು ನೀಡುವ ಮತಗಳು ಬಿಹಾರವನ್ನು ಹೊಸ ಮುಖಗಳೊಂದಿಗೆ 'ಜಂಗಲ್ ರಾಜ್' ಮರಳಿ ತರಲು ಪ್ರಯತ್ನಗಳಿಗೆ ತಡೆಯೊಡ್ಡುತ್ತವೆ ಎಂದು ಹೇಳಿದರು.

ಮಹಾಘಟಬಂಧನ್​​ದಲ್ಲಿ ಫೈಟ್​​

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಪುತ್ರರನ್ನು ಕ್ರಮವಾಗಿ ಬಿಹಾರ ಮುಖ್ಯಮಂತ್ರಿ ಮತ್ತು ಪ್ರಧಾನಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಷಾ, ಎರಡೂ ಹುದ್ದೆಗಳು ಖಾಲಿ ಇಲ್ಲ ಎಂಬ ತಮ್ಮ ಮಾತನ್ನು ಪುನರುಚ್ಛರಿಸಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಅಭಿವೃದ್ದಿ ಯೋಜನೆಗಳನ್ನು ಉಲ್ಲೇಖಿಸಿದ ಷಾ, ಜಿಎಸ್‌ಟಿ ಕಡಿತವು ಬಿಹಾರದ ಲಿಚಿ ಬೆಳೆಗಾರರಿಗೆ ನೆರವಾಗಲಿದೆ, ಮತ್ತು ಮುಜಫರ್ಪುರದಲ್ಲಿ 20,000 ಕೋಟಿ ರೂ. ಹೂಡಿಕೆಯೊಂದಿಗೆ ಮೆಗಾ ಫುಡ್ ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೋದಿ-ನಿತೀಶ್ ಆಡಳಿತದಲ್ಲಿ, ಬಿಹಾರವು ರೈಲು ಎಂಜಿನ್‌ಗಳನ್ನು ರಫ್ತು ಮಾಡಿದ ಮತ್ತು ಗಯಾಜಿಯಲ್ಲಿ ಎಂಜಿನಿಯರಿಂಗ್ ಕ್ಲಸ್ಟರ್ ಅನ್ನು ಸ್ಥಾಪಿಸಿದ ಮೊದಲ ರಾಜ್ಯವಾಯಿತು ಎಂದು ಹೇಳಿದರು.

ಬಿಹಾರದಲ್ಲಿ ನೀರಾವರಿಗಾಗಿ ರೈತರ ಹೊಲಗಳಿಗೆ ಕೋಶಿ, ಗಂಗಾ ಮತ್ತು ಗಂಡಕ್ ನದಿಗಳ ನೀರು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಒಂದು ಯೋಜನೆಯನ್ನು ರೂಪಿಸಿದ್ದಾರೆ, ಸೀತಾ ದೇವಿಯ ಜನ್ಮಸ್ಥಳವೆಂದು ಪರಿಗಣಿಸಲಾದ ಬಿಹಾರದ ಸೀತಾಮರ್ಹಿಯನ್ನು ರಾಮ ಮಂದಿರ ನಿರ್ಮಿಸಲಾಗಿರುವ ಉತ್ತರ ಪ್ರದೇಶದ ಅಯೋಧ್ಯೆಗೆ ಸಂಪರ್ಕಿಸಲು ವಿಶೇಷ ವಂದೇ ಭಾರತ್ ರೈಲು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಎನ್‌ಡಿಎ ಮಿತ್ರಪಕ್ಷಗಳಾದ ಬಿಜೆಪಿ, ಜೆಡಿ(ಯು), ಚಿರಾಗ್ ಪಾಸ್ವಾನ್​ರ ಎಲ್‌ಜೆಪಿ (ಆರ್‌ವಿ), ಎಚ್‌ಎಎಂ, ಕುಶ್ವಾಹರ ಪಕ್ಷವನ್ನು ಪಂಚ ಪಾಂಡವರು ಎಂದು ಕರೆದ ಷಾ, ಈ ಮೈತ್ರಿಕೂಟವು ಬಿಹಾರದ ಸಮೃದ್ಧಿಯನ್ನು ಖಚಿತಪಡಿಸುತ್ತದೆ ಎಂದರು.(ಏಜೆನ್ಸೀಸ್​)