ನ್ಯೂಸ್

'ರೆಟ್ರೋ' ನೋಡುಗರ ಮನಗೆದ್ದ 'ರುಕ್ಕು'; ವಿಶೇಷ ಪಾತ್ರದಲ್ಲಿ ಮಿಂಚಿದ ಸೌತ್​ ಬ್ಯೂಟಿಗೆ ಸಿನಿಪ್ರಿಯರ ಮೆಚ್ಚುಗೆ | Pooja Hegde

Pooja Hegde: ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್​ ಜತೆಗೆ ‘ಅಲಾ ವೈಕುಂಠಪುರಮುಲೋ’, ‘ಡಿಜೆ ದುವ್ವಾಡ ಜಗನ್ನಾಥಂ’ ಸೇರಿದಂತೆ ಒಂದಷ್ಟು ಸೂಪರ್​ಹಿಟ್​ ಚಿತ್ರಗಳಲ್ಲಿ ಮಿಂಚಿ, ಅಭಿಮಾನಿಗಳಿಂದ ಸೈ ಎನಿಸಿಕೊಂಡ ಕರಾವಳಿ ಬೆಡಗಿ, ಸೌತ್​ ಬ್ಯೂಟಿ ಪೂಜಾ ಹೆಗ್ಡೆ ಸದ್ಯ ತಮ್ಮ ಮುಂಬರುವ ಚಿತ್ರಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ. ‘ಹೌಸ್​ಫುಲ್ 4’ ಸೇರಿದಂತೆ ಹಲವು ಸಿನಿಮಾಗಳ ಮುಖೇನ ಬ್ಯಾಕ್​ ಟು ಬ್ಯಾಕ್​ ಹಿಟ್​ ಕೊಟ್ಟಿರುವ ಪೂಜಾ ಇದೀಗ 'ರೆಟ್ರೋ' ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ.

ಗ್ಲಾಮರ್​ ಪಾತ್ರಕ್ಕೆ ಮಾತ್ರ ಪೂಜಾ ಹೆಗ್ಡೆ ಸೀಮಿತ ಎನ್ನುವ ಮಾತು ಇದೀಗ ರೆಟ್ರೋ ಸಿನಿಮಾ ಮೂಲಕ ಬದಲಾಗಿದೆ. ನಟಿಸಿದ ಬಹುತೇಕ ಚಿತ್ರಗಳಲ್ಲಿ ಸಖತ್​ ಗ್ಲಾಮರಸ್​ ಆಗಿ ಮಿಂಚಿರುವ ಪೂಜಾ, ಸೂರ್ಯ ಅಭಿನಯದ ರೆಟ್ರೋ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೇವಲ ಗ್ಲಾಮರಸ್​ ಪಾತ್ರವಲ್ಲ ತನಗೆ ಯಾವ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವ ಕೆಲಸ ಮಾಡ್ತೀನಿ, ಅವಕಾಶ ಸಿಗಬೇಕು ಎನ್ನುವ ಮಾತು ಈಗ ಪೂಜಾ ಅವರದ್ದಾಗಿದೆ.

ರುಕ್ಮಿಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೂಜಾ, ಭಾವನೆಗಳ ಲೋಕದಲ್ಲಿ ಮಿಂದೆಳುವಂತೆ ನಟಿಸಿದ್ದಾರೆ. ಹೆಚ್ಚು ಸಂಭಾಷಣೆ ಇಲ್ಲದೆ ಕೇವಲ ಭಾವನೆಗಳಲ್ಲಿಯೇ ಬಹುತೇಕ ವಿಷಯವನ್ನು ಅರ್ಥೈಸಿಕೊಳ್ಳುವ ಹಾಗೂ ಅರ್ಥ ಮಾಡಿಸುವ ರುಕ್ಮಿಣಿ, ತನ್ನ ಮೌನದಿಂದಲೇ ಭಾವನೆಗಳನ್ನು ಹೇಳುವುದು ಪ್ರೇಕ್ಷಕರ ಗಮನ ಸೆಳೆದಿದೆ. ಒಂದು ಪಾತ್ರಕ್ಕೆ ಮಾತ್ರ ಸೀಮಿತವಾಗದ ನಟಿ, ರುಕ್ಮಿಣಿ ಪಾತ್ರದಲ್ಲಿ ಜೀವಿಸಿದ್ದಾರೆ. ಚಿತ್ರದ ಹಲವು ಭಾವನಾತ್ಮಕ ಸನ್ನಿವೇಶಗಳಲ್ಲಿ ನಟಿಯ ಅಭಿನಯಕ್ಕೆ ಫಿದಾ ಆಗಿರುವ ಸಿನಿಪ್ರಿಯರು, ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡದೆ ಹೋದರೂ ಪೂಜಾ ಹೆಗ್ಡೆ ಅಭಿನಯಕ್ಕೆ ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ ಹರಿದುಬಂದಿವೆ. ಸದ್ಯ ಉತ್ತಮ ಪ್ರತಿಕ್ರಿಯೆಗಳ ಜೊತೆಗೆ ತನ್ನ ಮುಂಬರುವ ಚಿತ್ರಗಳಲ್ಲಿ ಪೂಜಾ ಸಖತ್ ಬಿಜಿಯಾಗಿದ್ದಾರೆ. ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನನಾಯಕನ್' ಮತ್ತು ರಾಘವಲಾರೆನ್ಸ್ ಅವರ 'ಕಾಂಚನ-4' ಚಿತ್ರದಲ್ಲಿ ಪೂಜಾ ಅಭಿನಯಿಸುತ್ತಿದ್ದಾರೆ,(ಏಜೆನ್ಸೀಸ್).