| ಕೀರ್ತಿನಾರಾಯಣ ಸಿ. ಬೆಂಗಳೂರು
ರಾಷ್ಟ್ರಮಟ್ಟದಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮಾನ ಹರಾಜು ಹಾಕಿರುವ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ ಬಂಧಿತ ಡಿವೈಎಸ್ಪಿ ಶಾಂತಕುಮಾರ್, ಅವರ ಸಹಚರರನ್ನು ಸಿಐಡಿ ಮತ್ತೆ ಕಸ್ಟಡಿಗೆ ಪಡೆದಿದ್ದು, ಅಕ್ರಮಕ್ಕೆ ಕೈಜೋಡಿಸಿರುವ ದೊಡ್ಡವರ ವಿರುದ್ಧ 2ನೇ ಸುತ್ತಿನ ಸಾಕ್ಷ್ಯ ಸಂಗ್ರಹ ಆರಂಭಿಸಿದೆ. ಏತನ್ಮಧ್ಯೆ ಅಕ್ರಮದಲ್ಲಿ ಶಾಮೀಲಾಗಿ ಸಿಕ್ಕಿಬಿದ್ದಿರುವ ಪೊಲೀಸರು ಹಾಗೂ ಇತರ ಸರ್ಕಾರಿ ನೌಕರರ ವಿರುದ್ಧ ವಜಾಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆದಿದೆ.
ಪ್ರಕರಣದ ಸಂಬಂಧ ಈವರೆಗೆ 15 ಪೊಲೀಸರು, ಎಂಟು ಏಜೆಂಟ್ಗಳು, ಮೂವರು ಪ್ರಥಮ ದರ್ಜೆ (ಎಫ್ಡಿಎ) ಹಾಗೂ ದ್ವಿತೀಯ ದರ್ಜೆ (ಎಸ್ಡಿಎ) ನೌಕರರು, ಒಬ್ಬ ಸಹಾಯಕ ಇಂಜಿನಿಯರ್, ಪರೀಕ್ಷಾ ಕೇಂದ್ರಗಳ ನಾಲ್ವರು ಮೇಲ್ವಿಚಾರಕರು, 23ಕ್ಕೂ ಅಧಿಕ ಅಭ್ಯರ್ಥಿಗಳು ಹಾಗೂ ಒಬ್ಬ ಅಭ್ಯರ್ಥಿಯ ತಂದೆ ಹಾಗೂ ಇನ್ನೊಬ್ಬ ಅಭ್ಯರ್ಥಿಯ ಪತಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ಸಂಖ್ಯೆ 60 ದಾಟಿದೆ. ಅಕ್ರಮದಲ್ಲಿ ಶಾಮೀಲಾಗದಿದ್ದರೂ ಕರ್ತವ್ಯಲೋಪ ಆರೋಪದಲ್ಲಿ 11 ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಬಂಧಿತ 15 ಪೊಲೀಸರು ಹಾಗೂ ನಾಲ್ವರು ಸರ್ಕಾರಿ ಅಧಿಕಾರಿಗಳನ್ನು ಈಗಾಗಲೆ ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಶಾಶ್ವತವಾಗಿ ಡಿಸ್ವಿುಸ್ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಅಲ್ಲದೆ, ವಾಮಮಾರ್ಗದಲ್ಲಿ ಕೆಲಸ ಗಿಟ್ಟಿಸಲು ಹೋಗಿ ಸಿಕ್ಕಿಬಿದ್ದಿರುವ ಅಭ್ಯರ್ಥಿಗಳು ಇನ್ನುಮುಂದೆ ಯಾವುದೇ ಸರ್ಕಾರಿ ಉದ್ಯೋಗದ ಪರೀಕ್ಷೆ ಬರೆಯದಂತೆ ಕಪ್ಪುಪಟ್ಟಿಗೆ ಸೇರಿಸಲೂ ಸರ್ಕಾರ ತೀರ್ವನಿಸಿದೆ.
-2018ರಲ್ಲಿ ಹಳೇ ನೋಟು ಬದಲಿಸಿಕೊಡುವ ನೆಪದಲ್ಲಿ 35 ಲಕ್ಷ ರೂ. ದರೋಡೆ ನಡೆಸಿ ಜೈಲು ಸೇರಿದ್ದ ಕಲಾಸಿಪಾಳ್ಯ ಸಬ್ ಇನ್ಸ್ಪೆಕ್ಟರ್ ಎನ್.ಸಿ. ಮಲ್ಲಿಕಾರ್ಜುನ್ ಸೇರಿ 8 ಪೊಲೀಸರನ್ನು ವಜಾಗೊಳಿಸಿ ಆಗಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಖ್ ಆದೇಶ ಹೊರಡಿಸಿದ್ದರು.
- 2020 ಸೆ.20ರಂದು ಯಾದಗಿರಿಯಲ್ಲಿ ನಡೆಯುತ್ತಿದ್ದ ಪೊಲೀಸ್ ನೇಮಕಾತಿಯಲ್ಲಿ ತಮ್ಮನ ಹೆಸರಲ್ಲಿ ಪರೀಕ್ಷೆ ಬರೆಯುತ್ತಿದ್ದ ಬಾಗೇಪಲ್ಲಿ ಠಾಣೆ ಕಾನ್ಸ್ಟೇಬಲ್ ದೇವರಾಜ್ ಸಿಕ್ಕಿಬಿದ್ದಿದ್ದ. ಆರೋಪ ಸಾಬೀತಾಗಿದ್ದರಿಂದ 2021ರಲ್ಲಿ ಚಿಕ್ಕಬಳ್ಳಾಪುರ ಎಸ್ಪಿಯಾಗಿದ್ದ ಮಿಥುನ್ಕುಮಾರ್ ಆತನನ್ನು ವಜಾಗೊಳಿಸಿದ್ದರು.
- 2001ರಲ್ಲಿ ಕೇರಳ ಮೂಲದ ಆಭರಣ ವ್ಯಾಪಾರಿಗಳನ್ನು ವಂಚಿಸಿ 19 ಲಕ್ಷ ರೂ. ಸುಲಿಗೆ ಮಾಡಿದ್ದ ಆಗಿನ ವಿಜಯನಗರ ಸಂಚಾರ ವಿಭಾಗ ಎಸಿಪಿಯಾಗಿದ್ದ ಬೆಳ್ಳಿಯಪ್ಪ ಅವರನ್ನು ಅಂದಿನ ಪೊಲೀಸ್ ಕಮಿಷನರ್ ಸೇವೆಯಿಂದ ವಜಾಗೊಳಿಸಿದ್ದರು.
- 2016ರಲ್ಲಿ ಗಂಗಾವತಿಯ ಟ್ರಾಫಿಕ್ ಠಾಣೆಯಲ್ಲಿ ಪೇದೆಯಾಗಿದ್ದ ಕರಿಯಪ್ಪ ಸಬ್ ಡಿವಿಜನ್ ಆಫೀಸ್ ಎನ್ನುವ ವಾಟ್ಸ್ಆಪ್ ಗ್ರೂಪ್ಗೆ ವಿವಾದಾತ್ಮಕ ಸಂದೇಶ ರವಾನಿಸಿದ್ದರು. ಈ ಕಾರಣಕ್ಕೆ ಇನ್ಸ್ಪೆಕ್ಟರ್ ಕೊಟ್ಟ ವರದಿ ಆಧರಿಸಿ ಕರಿಯಪ್ಪ ಸೇವೆಯಿಂದ ವಜಾಗೊಂಡಿದ್ದರು.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಪೊಲೀಸರು ಸೇವೆಯಿಂದ ವಜಾಗೊಳ್ಳಲು ಅರ್ಹರಾಗಿದ್ದಾರೆ. ಸಿಐಡಿ ತನಿಖೆ ಪ್ರಗತಿಯಲ್ಲಿರುವುದರಿಂದ ಈ ಹಂತದಲ್ಲಿ ವಜಾಗೊಳಿಸಬಹುದೇ ಎಂದು ಕಾನೂನು ತಜ್ಞರ ಅಭಿಪ್ರಾಯ ಪಡೆದ ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. | ಆರಗ ಜ್ಞಾನೇಂದ್ರ ಗೃಹಸಚಿವ ಸರ್ಕಾರಿ ಹುದ್ದೆಯಲ್ಲಿರುವವರು ಕಾನೂನುಬಾಹಿರ ಕೃತ್ಯವೆಸಗಿದರೆ ಸೇವೆಯಿಂದ ವಜಾಗೊಳಿಸುವುದು ಸೇರಿ ಇನ್ನಿತರ ಶಿಸ್ತುಕ್ರಮ ಕೈಗೊಳ್ಳಲು ಅವಕಾಶ ಇದೆ. ಆದರೆ, ಅದಕ್ಕೂ ಮುನ್ನ ಇಲಾಖಾ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಐಪಿಸಿ ಸೆಕ್ಷನ್ಗಳಡಿ ದಾಖಲಾಗುವ ಪ್ರಕರಣಕ್ಕೆ ಕೋರ್ಟ್ ಶಿಕ್ಷೆ ವಿಧಿಸುತ್ತದೆ. ಒಂದು ವೇಳೆ ಕೋರ್ಟ್ನಲ್ಲಿ ಖುಲಾಸೆಯಾದರೂ ಇಲಾಖಾ ವಿಚಾರಣೆಯಲ್ಲಿ ವಿಧಿಸುವ ಶಿಕ್ಷೆ ಆದೇಶ ಅನೂರ್ಜಿತಗೊಳ್ಳುವುದಿಲ್ಲ. | ಸಿ.ಎಚ್. ಹನುಮಂತರಾಯ ಹಿರಿಯ ವಕೀಲ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಆರೋಪ ಕೇಳಿಬಂದರೆ ಅಮಾನತುಗೊಳಿಸಲು ಅವಕಾಶ ಇದೆ. ಇಲಾಖಾ ವಿಚಾರಣೆ ನಡೆಸಿ ವಜಾಗೊಳಿಸಬಹುದಾದರೂ ಆರೋಪ ಸಾಬೀತಾಗುವವರೆಗೆ ವಜಾಗೊಳಿಸುವುದು ಸೂಕ್ತವಲ್ಲ. ಆರೋಪ ಸಾಬೀತಾಗದೆ ಕೋರ್ಟ್ನಲ್ಲಿ ಖುಲಾಸೆಯಾಗಲೂಬಹುದು. | ಸಿ.ವಿ.ನಾಗೇಶ್ ಹಿರಿಯ ವಕೀಲ
ಮಧ್ಯವರ್ತಿಗಳಾಗಿ ಕೆಲಸ: ಇನ್ನೂ ಹಲವು ಪೊಲೀಸರು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಅಭ್ಯರ್ಥಿಗಳಿಗೆ ಉದ್ಯೋಗ ಕೊಡಿಸುವ ಭರವಸೆ ಕೊಟ್ಟು, ಅವರಿಂದ ಹಣ ಪಡೆದು ಬೇರೆಯವರಿಗೆ ತಲುಪಿಸುವ ಮಧ್ಯವರ್ತಿ ಕೆಲಸವನ್ನು ಮಾಡಿದ್ದಾರೆ. ಕೆಲವರು ತಲೆಮರೆಸಿಕೊಂಡಿದ್ದು, ಹುಡುಕಾಟ ಮುಂದುವರಿದಿದೆ.
ಜಾಮೀನು ಕೊಡಲು ನಿರಾಕರಣೆ: ಬಂಧಿತರ ವಿಚಾರಣೆ ಪೂರ್ಣಗೊಂಡಿದ್ದು, ಎಲ್ಲರೂ ಜೈಲಿನಲ್ಲಿದ್ದಾರೆ. ಬಹುತೇಕರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದೆ. ಸಿಐಡಿ ತನಿಖೆ ನಡೆಯುತ್ತಿರುವುದರಿಂದ ಜಾಮೀನು ಪಡೆದು ಹೊರಬಂದರೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಬಗ್ಗೆ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂವಿಧಾನದ 1949ರ 311ನೇ ವಿಧಿ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಅಧಿಕಾರಿ ಅಥವಾ ನೌಕರನನ್ನು ಸೇವೆಯಿಂದ ವಜಾಗೊಳಿಸಲು, ಹುದ್ದೆ ಶ್ರೇಣಿ ಹಿಂಬಡ್ತಿ ಕೊಡಲು ಸರ್ಕಾರಕ್ಕೆ ಅಧಿಕಾರ ಇದೆ. ಆದರೆ, ಅಧಿಕಾರಿ ಅಥವಾ ನೌಕರನ ವಿರುದ್ಧದ ಆರೋಪದ ಸಂಬಂಧ ಇಲಾಖಾ ವಿಚಾರಣೆಗೆ ಒಳಪಡಿಸಬೇಕು. ಆರೋಪಿತರಿಗೆ ನೋಟಿಸ್ ಕೊಟ್ಟು, ಲಿಖಿತ ಉತ್ತರ ಅಥವಾ ಹೇಳಿಕೆ ದಾಖಲಿಸಲು ಅವಕಾಶ ಕೊಡಬೇಕು. ಕಾನೂನುಬಾಹಿರ ಕೃತ್ಯವೆಸಗಿರುವುದು ಇಲಾಖಾ ವಿಚಾರಣೆಯಲ್ಲಿ ಸಾಬೀತಾದರೆ ಅಂತಹ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಸೇವೆಯಿಂದ ಶಾಶ್ವತವಾಗಿ ವಜಾಗೊಳಿಸಬಹುದು, ಹಿಂಬಡ್ತಿ ಕೊಡಬಹುದು ಅಥವಾ ವೇತನ ಹಿಂಬಡ್ತಿ ನೀಡಲೂ ಅವಕಾಶ ಇದೆ. ರಾಷ್ಟ್ರಪತಿ ಅಥವಾ ರಾಜ್ಯಪಾಲರು ರಾಜ್ಯದ ಭದ್ರತಾ ದೃಷ್ಟಿಯಿಂದ ಇಲಾಖಾ ವಿಚಾರಣೆ ನಡೆಸದೆಯೇ ವಜಾಗೊಳಿಸಬಹುದು.
ಕಾನ್ಸ್ಟೇಬಲ್ನಿಂದ ಸಬ್ ಇನ್ಸ್ಪೆಕ್ಟರ್ವರೆಗಿನ ಶ್ರೇಣಿಯಾಗಿದ್ದರೆ ಜಿಲ್ಲೆಯಲ್ಲಿ ಎಸ್ಪಿ ಹಾಗೂ ಕಮಿಷನ ರೇಟ್ನಲ್ಲಿ ಪೊಲೀಸ್ ಆಯುಕ್ತರು, ಆರೋಪಿತರನ್ನು ಸೇವೆಯಿಂದ ವಜಾಗೊಳಿ ಸಬಹುದು. ಇದಕ್ಕೆ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಅನುಮತಿ ಪಡೆಯ ಬೇಕಾಗುತ್ತದೆ. ಇನ್ಸ್ಪೆಕ್ಟರ್ ಹಾಗೂ ಡಿವೈಎಸ್ಪಿ ಶ್ರೇಣಿಯಾಗಿದ್ದಲ್ಲಿ ಸರ್ಕಾರದ ಅನುಮತಿ ಪಡೆದು ಡಿಜಿಪಿ ವಜಾಗೊಳಿಸಿ ಆದೇಶ ಹೊರಡಿಸಬಹುದು. ಅಲ್ಲದೆ, ಆರೋಪಿತರನ್ನು ಸೇವೆಯಿಂದ ವಜಾಗೊಳಿಸುವಂತೆ ಸರ್ಕಾರವೇ ಶಿಫಾರಸು ಮಾಡಬಹುದು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಯೊಬ್ಬರು ಹೇಳುತ್ತಾರೆ.
10 ಜನ ಸಸ್ಪೆಂಡ್: ಪರೀಕ್ಷಾ ಕೇಂದ್ರಗಳ ಭದ್ರತೆಗೆ ನಿಯೋಜನೆಗೊಂಡು ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಮೂವರು ಸಬ್ ಇನ್ಸ್ಪೆಕ್ಟರ್, ಇಬ್ಬರು ಎಎಸ್ಐಗಳು, ನಾಲ್ವರು ಹೆಡ್ ಕಾನ್ಸ್ಟೇಬಲ್ಗಳು ಹಾಗೂ ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಲಾಗಿದೆ.