ಹನೋಯಿ: ಬಳಸಿ ಬೀಸಾಡಿದ್ದ ಬರೋಬ್ಬರಿ 324,000 ಕಾಂಡೋಮ್ಗಳನ್ನು ಶುಚಿಗೊಳಿಸಿ ಮರುಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಕಾರ್ಖಾನೆ ಮೇಲೆ ವಿಯೆಟ್ನಾಂ ಪೊಲೀಸರು ದಾಳಿ ಮಾಡಿ ಕಾಂಡೋಮ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಉಪಯೋಗಿಸಿದ್ದ ಕಾಂಡೋಮ್ಗಳನ್ನು ಸಂಗ್ರಹಿಸಿ ರಾಸಯನಿಕಯುಕ್ತ ನೀರಿನಲ್ಲಿ ಶುಚಿಗೊಳಿಸಿ, ಪುರುಷರ ಮರ್ಮಾಂಗ ಮಾದರಿಯ ಕೋಲಿನಲ್ಲಿ ಮರುರೂಪಕೊಟ್ಟು ಮರು ಮಾರಾಟ ಮಾಡಲು ಯತ್ನಿಸಿದ್ದಾರೆ. ಈ ಕೆಲಸಕ್ಕಾಗಿ ದಿನಗೂಲಿ ನೌಕರರನ್ನು ಬಳಸಿಕೊಳ್ಳಲಾಗಿತ್ತು.
ಮರು ಪ್ಯಾಕೇಜ್ ಮಾಡಿ ಸಾರ್ವಜನಿಕ ಪ್ರದೇಶಗಳಲ್ಲಿ ಬಳಕೆಗೆ ಯೋಗ್ಯವಲ್ಲದ ಮತ್ತು ಸುರಕ್ಷಿತವಲ್ಲದ ಕಾಂಡೋಮ್ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈಗಾಗಲೇ ಒಂದಿಷ್ಟು ಪ್ರಮಾಣ ಕಾಂಡೋಮ್ಗಳು ಮಾರಾಟವಾಗಿವೆ ಎಂದು ತಿಳಿದುಬಂದಿದೆ.
ಈ ಅಕ್ರಮ ಕೆಲಸವು ದಕ್ಷಿಣ ವಿಯೆಟ್ನಾಂನ ಬಿನ್ಹ್ ಡೌಂಗ್ ಪ್ರಾಂತ್ಯದ ಗೋದಾಮು ಒಂದರಲ್ಲಿ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಕಳೆದ ಶನಿವಾರ ದಾಳಿ ನಡೆಸಿದ ವಿಯೆಟ್ನಾಂ ಪೊಲೀಸರು ಕಾಂಡೋಮ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಖಾನೆಯ ಮಾಲಕಿ ಥಿ ಥಾನ್ಹ್ ಗೋಕ್ (33)ಳನ್ನು ಪೊಲೀಸರು ಬಂಧಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರಿಂದ ತಿಂಗಳ ಹಿಂದೆ ಗೋಕ್ ಕಾಂಡೋಮ್ಗಳನ್ನು ಸ್ವೀಕರಿಸಿ, ತಮ್ಮ ಕಾರ್ಖಾನೆಯಲ್ಲಿಟ್ಟಿದ್ದಳು ಎಂದು ತಿಳಿದುಬಂದಿದೆ. ಪ್ರಕರಣದ ಸಾಕ್ಷಿಯನ್ನಾಗಿ ಕಾಂಡೋಮ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಅವುಗಳನ್ನು ಅಪಾಯಕಾರಿ ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಲಾಗಿರುವುದರಿಂದ ತಕ್ಷಣ ವಿಲೇವಾರಿ ಮಾಡಲಾಗಿದೆ. (ಏಜೆನ್ಸೀಸ್)