ಶಿವಸೇನಾ ನಾಯಕನ ಮನೆಯಲ್ಲೇ ಹೆರಾಯಿನ್ ಇಟ್ಟ ಪೊಲೀಸ್​ 
ನ್ಯೂಸ್

ಶಿವಸೇನಾ ನಾಯಕನ ಮನೆಯಲ್ಲೇ ಡ್ರಗ್ಸ್ ಇಟ್ಟ ಖಾಕಿ: ತಾನೇ ತೋಡಿದ ಹಳ್ಳಕ್ಕೆ ಬಿದ್ದ ಪೊಲೀಸ್! | Punjab Police Drugs

ಶಿವಸೇನಾ ನಾಯಕನ ಮನೆಯಲ್ಲಿ ಡ್ರಗ್ಸ್ ಇಟ್ಟು ಸುಳ್ಳು ಕೇಸ್ ಹಾಕಲು ಯತ್ನ

ಸಿಸಿಟಿವಿ ದೃಶ್ಯ ವೈರಲ್ ಬಳಿಕ ಎಎಸ್‌ಐ ಸುಖ್‌ದೇವ್ ಸಿಂಗ್‌ ಅಮಾನತು

ಮಹಂತ್ ಕಾಶ್ಮೀರಿ ಗಿರಿ ಮನೆಯ ಹಾಸಿಗೆ ಕೆಳಗೆ ಪಾರ್ಸಲ್ ಇಡುವ ಸಿಸಿಟಿವಿಯಲ್ಲಿ ಸೆರೆ

ಚಂಡೀಗಢ: ಪಂಜಾಬ್‌ನ ಖನ್ನಾದಲ್ಲಿ ಪೊಲೀಸ್ ಇಲಾಖೆಯನ್ನೇ ಮುಜುಗರಕ್ಕೀಡು ಮಾಡುವಂತಹ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಶಿವಸೇನಾ ನಾಯಕ ಮಹಂತ್ ಕಾಶ್ಮೀರಿ ಗಿರಿ ಅವರ ಮನೆಯಲ್ಲಿ ಪೋಲಿಸ್ ಅಧಿಕಾರಿಯೊಬ್ಬರು ಡ್ರಗ್ಸ್ ಇಟ್ಟು ಸುಳ್ಳು ಪ್ರಕರಣ ದಾಖಲಿಸಲು ಯತ್ನಿಸಿದ್ದು, ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದ ಬೆನ್ನಲ್ಲೇ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಖನ್ನಾದ ಸಹಾಯಕ ಸಬ್‌ಇನ್ಸ್‌ಪೆಕ್ಟರ್ (ಎಎಸ್‌ಐ) ಸುಖ್‌ದೇವ್ ಸಿಂಗ್ ಅಮಾನತಾದ ಅಧಿಕಾರಿ. ಖನ್ನಾ ಪೊಲೀಸರು ಶಿವಸೇನಾ ನಾಯಕ ಮಹಂತ್ ಕಾಶ್ಮೀರಿ ಗಿರಿ ಅವರ ಮನೆಯಿಂದ ಹೆರಾಯಿನ್ ವಶಪಡಿಸಿಕೊಂಡು ಅವರನ್ನು ಬಂಧಿಸಿದ್ದಾರೆ ಎಂದು ಶನಿವಾರ ಹೇಳಿದ್ದರು. ಆದರೆ, ಇದರ ಬೆನ್ನಲ್ಲೇ ಗಿರಿ ಅವರ ಮನೆಯಲ್ಲಿದ್ದ ರಹಸ್ಯ ಕ್ಯಾಮೆರಾದ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ?

ವೈರಲ್ ಆದ ಸಿಸಿಟಿವಿ ದೃಶ್ಯದಲ್ಲಿ, ಸಾದಾ ಉಡುಪಿನಲ್ಲಿದ್ದ ಎಎಸ್‌ಐ ಸುಖ್‌ದೇವ್ ಸಿಂಗ್ ಕೊಠಡಿಗೆ ಬಂದು ಬೆಡ್ ಕೆಳಗೆ ಏನನ್ನೋ ಇಡುವುದು ಸ್ಪಷ್ಟವಾಗಿ ಕಂಡಿದೆ. ಅದಾದ ಬಳಿಕ ಸದರ್ ಠಾಣೆಯ ಎಸ್‌ಎಚ್‌ಒ ವಿಜಯಪಾಲ್ ಸಿಂಗ್ ಹಾಗೂ ಸಿಟಿ-2 ಎಸ್‌ಎಚ್‌ಒ ತರ್ವಿಂದರ್ ಕುಮಾರ್ ಬೇಡಿ ನೇತೃತ್ವದ ಪೊಲೀಸ್ ಪಡೆ ಸ್ಥಳಕ್ಕೆ ಬಂದಿದೆ. ಶೋಧ ನಡೆಸುವ ನೆಪದಲ್ಲಿ ಅದೇ ಬೆಡ್ ಕೆಳಗಿದ್ದ 30 ಗ್ರಾಂ ಹೆರಾಯಿನ್ ವಶಪಡಿಸಿಕೊಂಡು, ಗಿರಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಇದನ್ನೂ ಓದಿ: ನೆನೆಸಿದ ಅಂಜೂರ ದಿನವೂ ತಿಂದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಅಚ್ಚರಿಯ ಆರೋಗ್ಯ ರಹಸ್ಯ! | Anjeer Benefits

ಇದಕ್ಕೂ ಮುನ್ನ ಗಿರಿ ಅವರ ಚಾಲಕ ಗುರ್ಜಾಂತ್ ಸಿಂಗ್ ಅಲಿಯಾಸ್ ಜನತಾ ಎಂಬಾತನನ್ನು 7.5 ಗ್ರಾಂ ಹೆರಾಯಿನ್‌ನೊಂದಿಗೆ ವಶಕ್ಕೆ ಪಡೆಯಲಾಗಿತ್ತು. ಆತನ ವಿಚಾರಣೆ ವೇಳೆ ಗಿರಿ ಅವರ ಹೆಸರು ಬಂದಿದ್ದರಿಂದ ಪೊಲೀಸರ ತಂಡ ಮನೆಗೆ ದಾಳಿ ನಡೆಸಿತ್ತು ಎಂದು ಹೇಳಲಾಗಿತ್ತು. ಆದರೆ, ಎಎಸ್‌ಐ ಮನೆಯೊಳಗೆ ಡ್ರಗ್ಸ್ ಇಟ್ಟ ದೃಶ್ಯ ಬಯಲಾಗುತ್ತಿದ್ದಂತೆ ಉನ್ನತಾಧಿಕಾರಿಗಳು ಎಎಸ್‌ಐ ಸುಖ್‌ದೇವ್ ಸಿಂಗ್ ವಿರುದ್ಧ ಅಮಾನತು ಕ್ರಮ ಕೈಗೊಂಡಿದ್ದಾರೆ. (ಏಜೆನ್ಸೀಸ್​)